×
Ad

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿ: ಪೋಲಂಡ್ ವಿದ್ಯಾರ್ಥಿಗೆ ಭಾರತ ಬಿಡಲು ಸೂಚನೆ

Update: 2020-03-01 21:08 IST

ಕೋಲ್ಕತಾ,ಮಾ.1: ಜಾಧವಪುರ ವಿವಿಯಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ ಪೋಲಂಡ್ ಮೂಲದ ವಿದ್ಯಾರ್ಥಿ ಕೋಲ್ಕತಾದಲ್ಲಿ ನಡೆದಿದ್ದ ಸಿಎಎ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಯು ಭಾರತವನ್ನು ತೊರೆಯುವಂತೆ ಸೂಚಿಸಿದೆ.

 ಇತ್ತೀಚೆಗಷ್ಟೇ ವಿಶ್ವಭಾರತಿ ವಿವಿಯ ಬಾಂಗ್ಲಾದೇಶಿ ವಿದ್ಯಾರ್ಥಿನಿ ಯೋರ್ವಳು ಕ್ಯಾಂಪಸ್‌ನಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆಕೆಗೂ ದೇಶವನ್ನು ತೊರೆಯುವಂತೆ ಎಫ್‌ಆರ್‌ಆರ್‌ಒ ನಿರ್ದೇಶ ನೀಡಿತ್ತು.

ತುಲನಾತ್ಮಕ ಸಾಹಿತ್ಯದ ವಿದ್ಯಾರ್ಥಿಯಾಗಿರುವ ಪೋಲಂಡ್‌ನ ಕಾಮಿಲ್ ಸೀಡಿನ್‌ಸ್ಕಿ ಅವರನ್ನು ಫೆ.29ರಂದು ಕೋಲ್ಕತಾದಲ್ಲಿಯ ತನ್ನ ಕಚೇರಿಗೆ ಕರೆಸಿಕೊಂಡಿದ್ದ ಎಫ್‌ಆರ್‌ಆರ್‌ಒ,ವಿದ್ಯಾರ್ಥಿ ವೀಸಾದಲ್ಲಿ ಭಾರತದಲ್ಲಿ ವಾಸವಾಗಿರುವ ವಿದೇಶಿ ವಿದ್ಯಾರ್ಥಿಗೆ ಸೂಕ್ತವಲ್ಲದ ವರ್ತನೆಗಾಗಿ 15 ದಿನಗಳಲ್ಲಿ ದೇಶವನ್ನು ತೊರೆಯುವಂತೆ ನೋಟಿಸನ್ನು ಜಾರಿಗೊಳಿಸಿದೆ ಎಂದು ವಿವಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೋಲ್ಕತಾದ ಮೌಲಾಲಿಯಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸೀಡಿನ್‌ಸ್ಕಿ ಬೆಲೆಯನ್ನು ತೆರುತ್ತಿದ್ದಾರೆ ಎಂದು ವಿವಿಯ ಹಲವಾರು ಶಿಕ್ಷಕರು ಮತ್ತು ಎಡಪಂಥೀಯ ಒಲವುಳ್ಳ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿವೆ. ಬಂಗಾಳಿ ದೈನಿಕವೊಂದು ಸೀಡಿನ್‌ಸ್ಕಿಯ ಸಂದರ್ಶನ ನಡೆಸಿತ್ತು ಮತ್ತು ಮರುದಿನ ಅದನ್ನು ಪ್ರಕಟಿಸಿತ್ತು.

ಬಹುಶಃ ಯಾರೋ ಈ ವರದಿಯ ಪ್ರತಿಯನ್ನು ಎಫ್‌ಆರ್‌ಆರ್‌ಒಗೆ ಕಳುಹಿಸಿದ್ದಾರೆ. ಸೀಡಿನ್‌ಸ್ಕಿಗೆ ರಾಜಕೀಯ ಆಸಕ್ತಿಯಿಲ್ಲ,ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮತ್ತು ಚಿತ್ರಗಳನ್ನು ಕ್ಲಿಕ್ಕಿಸುವ ಉತ್ಸಾಹ ಆತನನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ಈ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ತಿಳಿಸಿದೆ.

ಸೀಡಿನ್‌ಸ್ಕಿ ಈ ಮೊದಲು ವಿಶ್ವಭಾರತಿ ವಿವಿಯಲ್ಲಿ ಬಂಗಾಳಿ ಮತ್ತು ಸಂಸ್ಕೃತ ಅಧ್ಯಯನ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News