ದಿಲ್ಲಿ ಹಿಂಸಾಚಾರ: ‘ಮಹಡಿಯಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆವು’

Update: 2020-03-01 16:33 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ.1: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಕರಾಳ ಘಟನೆ ತನ್ನನ್ನು ಸ್ವಪ್ನದಲ್ಲೂ ಕಾಡುತ್ತಿದೆ ಎಂದು 60 ವರ್ಷದ ಬಿಲ್ಕಿಸ್ ಬಾನೊ ಎಂಬವರು ಹೇಳಿದ್ದಾರೆ.

ಬಿಲ್ಕಿಸ್ ಬಾನೊ ಶಿವವಿಹಾರ ಪ್ರದೇಶದಲ್ಲಿ ಕಳೆದ 35 ವರ್ಷದಿಂದ ವಾಸಿಸುತ್ತಿದ್ದಾರೆ. ಕಳೆದ ಸೋಮವಾರ ನಡೆದ ಹಿಂಸಾಚಾರದ ಸಂದರ್ಭ ಇವರ ಮನೆಗೂ ಬೆಂಕಿಹಚ್ಚಲಾಗಿದ್ದು ಎರಡು ಮಹಡಿಯ ಮನೆ ಈಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮನೆಗೆ ಹೊಂದಿಕೊಂಡೇ ಇರುವ ಅಂಗಡಿಯೂ ಸುಟ್ಟುಹೋಗಿದೆ. ಮನೆಗೆ ಬೆಂಕಿ ಬಿದ್ದಾಗ ತಾನು ಮನೆಯೊಳಗೇ ಇದ್ದೆ. ಮನೆ ಹೊತ್ತಿ ಉರಿಯುತ್ತಿದ್ದಾಗ ಹೊರಗೆ ಓಡುವ ಭರದಲ್ಲಿ ಎಡವಿ ಬಿದ್ದುಬಿಟ್ಟೆ. ಕಿಡಿಗೇಡಿಗಳು ತನ್ನ ಸುತ್ತಮುತ್ತಲೂ ಓಡಾಡುತ್ತಾ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದರು. ನಿಧಾನಕ್ಕೆ ತೆವಳಿಕೊಂಡು ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಹಿರಿಯ ಪುತ್ರ ಮುಹಮ್ಮದ್ ಯೂಸುಫ್ ತನ್ನನ್ನು ಅಲ್ಲಿಂದ ಎಳೆದುಕೊಂಡು ಸಾಗಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಎಂದು ಬಿಲ್ಕಿಸ್ ಬಾನೊ ಹೇಳಿದ್ದಾರೆ.

 ಸಮೀಪದ ಯಮುನಾ ವಿಹಾರ ಪ್ರದೇಶದ ನಿವಾಸಿಯಾಗಿರುವ 33 ವರ್ಷದ ಪ್ರೀತಿ ಗಾರ್ಗ್ ಮನೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆಗೆ ಬೆಂಕಿ ಬಿದ್ದಾಗ ಪತಿ, ಅತ್ತೆ ಹಾಗೂ ಇಬ್ಬರು ಮಕ್ಕಳ ಸಹಿತ ಮನೆಯಲ್ಲೇ ಇದ್ದೆ. ಬೆಂಕಿಯ ಕೆನ್ನಾಲಗೆಯ ಮಧ್ಯೆಯೇ 9 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಮೊದಲು ಮೊದಲನೇ ಮಹಡಿಯಿಂದ ಜಾಗರೂಕತೆಯಿಂದ ಕೆಳಗೆ ಇಳಿಸಿದೆವು. ಬಳಿಕ ನಾವು ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿರುವುದಾಗಿ ಅವರು ವಿವರಿಸಿದ್ದಾರೆ.

ಮೊದಲು ಕಲ್ಲೆಸೆತ ಆರಂಭವಾಗಿತ್ತು. ಬಳಿಕ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಲಾಗಿದೆ. ಅಲ್ಲಿಂದ ಮುಂದುವರಿದ ದುಷ್ಕರ್ಮಿಗಳ ಗುಂಪು ಮನೆಯ ಮುಂಭಾಗಕ್ಕೆ ಬೆಂಕಿ ಹಚ್ಚಿದ್ದಾರೆ .ಈಗ ಮನೆಯ ನೆಲಮಹಡಿ ಸಂಪೂರ್ಣ ಸುಟ್ಟುಹೋಗಿದೆ ಎಂದು ಪ್ರೀತಿ ಗಾರ್ಗ್ ವಿವರಿಸಿದ್ದಾರೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು 150ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News