×
Ad

ಮೇಘಾಲಯ: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ; ಹಿಂಸಾಚಾರಕ್ಕೆ ಮೂವರು ಬಲಿ

Update: 2020-03-01 22:18 IST
ಫೈಲ್ ಚಿತ್ರ

ಶಿಲಾಂಗ್, ಮಾ.1: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮತ್ತು ರಾಜ್ಯದಲ್ಲಿ ಇನ್ನರ್‌ಲೈನ್ ಪರ್ಮಿಟ್(ಐಎಲ್‌ಪಿ) ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮೇಘಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಚೂರಿ ಇರಿತಕ್ಕೆ ಬಲಿಯಾದವರ ಸಂಖ್ಯೆ 3ಕ್ಕೇರಿದೆ ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಇಚಮಾಟಿ ಪ್ರದೇಶದಲ್ಲಿ ಪೌರತ್ವ ವಿರೋಧಿ ಕಾಯ್ದೆಯನ್ನು ವಿರೋಧಿಸುವ ಹಾಗೂ ರಾಜ್ಯದಲ್ಲಿ ಐಎಲ್‌ಪಿ ಜಾರಿಗೊಳಿಸಬೇಕೆಂಬ ಒತ್ತಾಯದ ಬಗ್ಗೆ ಚರ್ಚಿಸಲು ಖಾಸಿ ವಿದ್ಯಾರ್ಥಿ ಯೂನಿಯನ್ ಹಾಗೂ ಆದಿವಾಸಿಗಳಲ್ಲದ ಸ್ಥಳೀಯರ ಮಧ್ಯೆ ಸಭೆ ನಡೆದಿತ್ತು. ಸಭೆಯಲ್ಲಿ ತೀವ್ರ ಮಾತಿನ ಚಕಮಕಿಯ ಬಳಿಕ ನಡೆದ ಘರ್ಷಣೆಯಲ್ಲಿ ಸ್ಥಳೀಯ ಟ್ಯಾಕ್ಸಿ ಚಾಲಕ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಆರಂಭವಾದ ಹಿಂಸಾಚಾರ ಕಳೆದ ಮೂರು ದಿನಗಳಲ್ಲಿ ತೀವ್ರ ರೂಪಕ್ಕೆ ತಿರುಗಿದೆ.

ಶಿಲಾಂಗ್ ಹಾಗೂ ಪಕ್ಕದ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರೂ ಘರ್ಷಣೆ ಮತ್ತು ಹಿಂಸಾಚಾರ ಮುಂದುವರಿದಿದೆ. ರಿ ಭೋಯಿ ಜಿಲ್ಲೆ ಹಾಗೂ ವೆಸ್ಟ್ ಗರೊ ಹಿಲ್ಸ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಶಿಲಾಂಗ್‌ನ ಪಿಂಥೋರ್‌ಬಾಹ್ ಪ್ರದೇಶದಲ್ಲಿ ವಸತಿ ಪ್ರದೇಶದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದು ಯಾವುದೇ ಪ್ರಾಣಹಾನಿ ಅಥವಾ ಆಸ್ತಿಹಾನಿ ಸಂಭವಿಸಿಲ್ಲ. ರಾಜ್ಯದ ಲಾಂಗ್‌ಸಿಂಗ್ ಮತ್ತು ಐವ್‌ಸೊಹ್ರಾ ಮಾರುಕಟ್ಟೆಗಳಲ್ಲಿ ಘರ್ಷಣೆ ಭುಗಿಲೆದ್ದಿದ್ದು ಹಲವರಿಗೆ ಚಾಕು ಇರಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ, ಟ್ಯಾಕ್ಸಿ ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಮೃತ ಟ್ಯಾಕ್ಸಿ ಚಾಲಕನ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಹಿಂಸಾಚಾರ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News