ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಜೋಗಿಂದರ್ ಸೈನಿ ನಿಧನ

Update: 2020-03-01 18:27 GMT

ಪಟಿಯಾಲ,ಮಾ.1: ಹಿರಿಯ ಅಥ್ಲೆಟಿಕ್ಸ್ ಕೋಚ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಜೋಗಿಂದರ್ ಸಿಂಗ್ ಸೈನಿ ವಯೋಸಹಜ ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದಾರೆ.

90ರ ಹರೆಯದ ಸೈನಿ 1970ರಿಂದ 90ರ ತನಕ ಮುಖ್ಯ ರಾಷ್ಟ್ರೀಯ ಅಥ್ಲೆಟಿಕ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ಭಾರತದ ಹಲವು ಶ್ರೇಷ್ಠ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಟಾರ್‌ಗಳನ್ನು ಬೆಳೆಸಿದ್ದರು. ಕಳೆದ ಕೆಲವು ದಿನಗಳಿಂದ ಸೈನಿ ಅನಾರೋಗ್ಯಪೀಡಿತರಾಗಿದ್ದರು.

‘‘ನಮ್ಮ ಸಹೋದ್ಯೋಗಿ, ನನ್ನ ಮುಖ್ಯ ಕೋಚ್ ಹಾಗೂ ಸಲಹೆಗಾರ ಸೈನಿ ನಿಧನದ ಸುದ್ದಿ ಕೇಳಿ ನಿಜಕ್ಕೂ ನನಗೆ ತೀವ್ರ ಬೇಸರವಾಗಿದೆ. ಅವರು ಅಥ್ಲೀಟ್‌ಗಳನ್ನು ತುಂಬಾ ಇಷ್ಟಪಡುತ್ತಿದ್ದರು. ಕೊನೆಯ ದಿನದ ತನಕ ಭಾರತದ ಅಥ್ಲೆಟಿಕ್ಸ್ ಒಕ್ಕೂಟಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಅವರು ನನ್ನ ಸ್ನೇಹಿತ, ಫಿಲೋಸಫರ್ ಹಾಗೂ ಮಾರ್ಗದರ್ಶಕರಾಗಿದ್ದರು. ನನಗೆ ಆಗಾಗ ಸೂಕ್ತ ಸಲಹೆ ಸೂಚನೆಯನ್ನು ನೀಡುತ್ತಿದ್ದರು’’ಎಂದು ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಹೇಳಿದ್ದಾರೆ.

ಪಂಜಾಬ್‌ನ ಹೊಶಿಯಾರ್ಪುರ ಜಿಲ್ಲೆಯಲ್ಲಿ 1930, ಜನವರಿ 1ರಂದು ಜನಿಸಿರುವ ಸೈನಿ ವಿಜ್ಞಾನ ಪದವೀಧರರಾಗಿದ್ದು, ಎನ್‌ಐಎಸ್ ಪಟಿಯಾಲದಲ್ಲಿ ದೈಹಿಕ ಶಿಕ್ಷಣದಲ್ಲಿ ಡಿಪ್ಲೋಮಾ ಹಾಗೂ ಕೋಚಿಂಗ್ ಕೋರ್ಸ್ ಪೂರ್ಣಗೊಳಿಸಿದ ಬಳಿಕ 1954ರಲ್ಲಿ ಅಥ್ಲೀಟ್‌ಗಳಿಗೆ ಕೋಚ್ ಆಗಿದ್ದರು. 1970ರಲ್ಲಿ ಭಾರತದ ಅಮೆಚೂರ್ ಅಥ್ಲೆಟಿಕ್ಸ್ ಒಕ್ಕೂಟದ ಕೋಚ್ ಆಗಿದ್ದರು. ಸೈನಿ 1997ರಲ್ಲಿ ಭಾರತೀಯ ಅಥ್ಲೆಟಿಕ್ಸ್‌ಗೆ ನೀಡಿದ ಕೊಡುಗೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದ್ದರು. 1978ರ ಏಶ್ಯನ್ ಗೇಮ್ಸ್‌ನಲ್ಲಿ 8 ಚಿನ್ನ ಸಹಿತ 18 ಪದಕಗಳನ್ನು ಜಯಿಸಿದ್ದ ಭಾರತೀಯ ಅಥ್ಲೆಟಿಕ್ಸ್ ತಂಡಕ್ಕೆ ಸೈನಿ ಮುಖ್ಯ ಕೋಚ್ ಆಗಿದ್ದರು. ಭಾರತೀಯ ಅಥ್ಲೆಟಿಕ್ಸ್ ಸಮೂಹದವರಿಂದ ‘ಸೈನಿ ಸಾಬ್’ ಎಂದೇ ಕರೆಯಲ್ಪಡುತ್ತಿದ್ದ ಸೈನಿ 2004ರ ತನಕ ಕೋಚಿಂಗ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಆ ಬಳಿಕ ಅವರು ಎಎಫ್‌ಐಗೆ ಸಲಹೆಗಾರರಾಗಿದ್ದರು.

1962ರಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಗುರ್ಬಚನ್ ಸಿಂಗ್ ರಾಂಧವಾಗೆ ಪ್ರೋತ್ಸಾಹ ನೀಡಿದ್ದ ಸೈನಿ ಲೆಜೆಂಡರಿ ಮ್ಯಾರಥಾನ್ ಓಟಗಾರ ಶಿವನಾಥ ಸಿಂಗ್ ಸಹಿತ ಹಲವು ಪ್ರಮುಖ ಅಥ್ಲೀಟ್‌ಗಳಿಗೆ ಕೋಚಿಂಗ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News