×
Ad

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮೇಲೆ ಬ್ಯಾಟ್‍ನಿಂದ ದಾಳಿ ನಡೆಸಿದ ದುಷ್ಕರ್ಮಿ

Update: 2020-03-02 16:51 IST

ಗಾಝಿಯಾಬಾದ್: ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಭೂಸ್ವಾಧೀನ) ರ ಮೇಲೆ ಕ್ರಿಕೆಟ್ ಬ್ಯಾಟ್‍ ನಿಂದ ದಾಳಿ ನಡೆಸಿದ ಘಟನೆ ಇಲ್ಲಿನ ಸೆಕ್ಟರ್ 14 ರಾಜ್ ನಗರ್ ಎಂಬಲ್ಲಿನ ಪಾರ್ಕ್ ಒಂದರಲ್ಲಿ ನಡೆದಿದೆ. ಗಾಯಗೊಂಡಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮದನ್ ಸಿಂಗ್ ಗರ್ಬಯಾಲ್ ಅವರನ್ನು ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂದಿನಂತೆ ಮನೆ ಸಮೀಪದ ಪಾರ್ಕ್‍ ಗೆ ವಾಕಿಂಗ್‍ ಗೆ ಹೋಗಿದ್ದ ಅಧಿಕಾರಿಯ ಮೇಲೆ ಜಸ್ವೀರ್ ಸಿಂಗ್ ಎಂಬಾತ ಹಲ್ಲೆ ನಡೆಸಿದ್ದ. ಆರೋಪಿಯನ್ನು ಬಂಧಿಸಲಾಗಿದ್ದು ಆತನನ್ನು 1995ರಲ್ಲಿ ಸೇನೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಈ ವಿಚಾರವಿನ್ನೂ ದೃಢಪಟ್ಟಿಲ್ಲ.

ಆತ ನಂತರ ಮಾಲ್ ಒಂದರಲ್ಲಿ ಬೌನ್ಸರ್ ಆಗಿ ಕೆಲಸ ಮಾಡಿದ್ದರೂ ಅಲ್ಲಿಂದಲೂ ವಜಾಗೊಂಡು ಸದ್ಯ ನಿರುದ್ಯೋಗಿಯಾಗಿದ್ದ. ಹರ್ಯಾಣದ ಜಿಂದ್ ಎಂಬ ಗ್ರಾಮದವನಾದ ಆತ ರಾಜಾಪುರ್ ಗ್ರಾಮದಲ್ಲಿ ವಾಸವಾಗಿದ್ದಾನೆ. ದಾಳಿಯಿಂದಾಗಿ ಅಧಿಕಾರಿಯ ಮುಖ ಹಾಗೂ ತಲೆಗೆ ಗಾಯಗಳಾಗಿವೆ. ಅವರು ಅಪಾಯದಿಂದ ಪಾರಾಗಿದ್ದಾರೆ ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾವು ಈ ಹಿಂದೆ  ಜಸ್ವೀರ್ ಸಿಂಗ್‍ ನನ್ನು ಆ ಪಾರ್ಕ್‍ ನಲ್ಲಿ ನೋಡಿರದೇ ಇದ್ದುದರಿಂದ ಎಡಿಎಂ ಅವರು ಆತನ ಪರಿಚಯ ಕೇಳಿದ್ದರು. ಇದರಿಂದ ಕೋಪಗೊಂಡ ಆತ ಅಲ್ಲಿಯೇ ಆಡುತ್ತಿದ್ದ ಬಾಲಕನ ಕೈಯ್ಯಿಂದ ಕ್ರಿಕೆಟ್ ಬ್ಯಾಟ್ ಸೆಳೆದು ಅಧಿಕಾರಿಯ ಮೇಲೆ ದಾಳಿ ನಡೆಸಿದ್ದ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News