ಇಂತಹ ಘಟನೆಗಳನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ: ದಿಲ್ಲಿ ಹಿಂಸಾಚಾರ ಕುರಿತು ಸಿಜೆಐ ಬೊಬ್ಡೆ

Update: 2020-03-02 14:51 GMT

ಹೊಸದಿಲ್ಲಿ,ಮಾ.2: ದಿಲ್ಲಿಯಲ್ಲಿ ಕೋಮು ದಂಗೆಗಳನ್ನು ತಡೆಯುವಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು ಇಂತಹ ಘಟನೆಗಳು ನಡೆಯುವುದನ್ನು ತಡೆಯಲು ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದೆ.

ಸೋಮವಾರ ಈಶಾನ್ಯ ದಿಲ್ಲಿ ಕೋಮು ಹಿಂಸಾಚಾರದ 10 ಸಂತ್ರಸ್ತರು ದ್ವೇಷಭಾಷಣ ಮಾಡಿದ್ದ ರಾಜಕೀಯ ನಾಯಕರ ವಿರುದ್ಧ ಕ್ರಮಕ್ಕಾಗಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ಅವರು,ಇಂತಹ ಘಟನೆಗಳು ನಡೆದ ಬಳಿಕವಷ್ಟೇ ನ್ಯಾಯಾಲಯಗಳು ರಂಗವನ್ನು ಪ್ರವೇಶಿಸುತ್ತವೆ ಎಂದು ಹೇಳಿದರು. ನ್ಯಾಯಾಲಯವು ತಕ್ಷಣ ಮಧ್ಯಪ್ರವೇಶಿಸಿ ಕೋಮು ಹಿಂಸಾಚಾರ ಹರಡುವುದನ್ನು ತಡೆಯಲು ನಿರ್ದೇಶಗಳನ್ನು ಹೊರಡಿಸಬೇಕು ಎಂದು ಅರ್ಜಿದಾರರ ಪರ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಆಗ್ರಹಿಸಿದ್ದರು. ಐದಾರು ಗಣ್ಯ ವ್ಯಕ್ತಿಗಳು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ಹೇಳಿದರು.

 ಜನರು ಸಾಯಬೇಕೆಂದು ನ್ಯಾಯಾಲಯವು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾ.ಬೊಬ್ಡೆ ಅವರು,”ಇಂತಹ ಘಟನೆಗಳು ನಡೆಯುವುದನ್ನು ತಡೆಯಲು ನಮಗೆ ಸಾಧ್ಯವಿಲ್ಲ. ನಾವು ಪ್ರತಿಬಂಧಕ ಪರಿಹಾರಗಳನ್ನು ಒದಗಿಸಲು ಸಾಧ್ಯವಿಲ್ಲ. ನಮ್ಮ ಮೇಲೆ ಒಂದು ರೀತಿಯ ಒತ್ತಡವಿದೆ ಮತ್ತು ನಮಗೆ ಅದನ್ನು ನಿಭಾಯಿಸಲಾಗುತ್ತಿಲ್ಲ”ಎಂದರು.

 ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ,ಅನುರಾಗ್ ಠಾಕೂರ್ ಹಾಗೂ ದ್ವೇಷಭಾಷಣ,ದಂಗೆ,ಕೊಲೆ ಮತ್ತು ಬೆಂಕಿ ಹಚ್ಚುವಿಕೆಯಲ್ಲಿ ಭಾಗಿಯಾಗಿರುವ ಇತರ ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ಶೇಖ್ ಮುಜ್ತಬಾ ಫಾರೂಕ್ ಮತ್ತು ಇತರ ಒಂಭತ್ತು ಸಂತ್ರಸ್ತರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News