ಸಂಸದೀಯ ಸಮಿತಿಗಳ 244 ಸಂಸದರ ಪೈಕಿ 95 ಜನರು ಎಲ್ಲ ಸಭೆಗಳಿಗೂ ಗೈರು: ನಾಯ್ಡು

Update: 2020-03-02 15:12 GMT

ಹೊಸದಿಲ್ಲಿ,ಮಾ.2: ಮುಂಗಡಪತ್ರ ಮಂಡನೆಯ ಬಳಿಕ ವಿವಿಧ ಸಚಿವಾಲಯಗಳಿಗೆ ಅನುದಾನ ಹಂಚಿಕೆಗಳ ಪುನರ್‌ಪರಿಶೀಲನೆಗಾಗಿ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿಗಳ 224 ಸಂಸದರ ಪೈಕಿ 95 (ಶೇ.39) ಸಂಸದರು ಒಂದೂ ಸಭೆಗೆ ಹಾಜರಾಗಿಲ್ಲ. ಹಿಂದಿನ ಸಲ ಇಂತಹವರ ಸಂಖ್ಯೆ ಕೇವಲ 28 ಆಗಿತ್ತು ಎಂದು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ ತಿಳಿಸಿದರು. ಒಟ್ಟು ಎರಡು ಡಝನ್ ಸಮಿತಿಗಳಿದ್ದು, ಲೋಕಸಭೆಯ 166 ಮತ್ತು ರಾಜ್ಯಸಭೆಯ 78 ಸದಸ್ಯರನ್ನು ಒಳಗೊಂಡಿವೆ.

1993ರಲ್ಲಿ ಇಲಾಖಾ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗಳು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಎಲ್ಲ ಪಕ್ಷಗಳ ಸದಸ್ಯರನ್ನೊಳಗೊಂಡಿರುವ ಈ ಸಮಿತಿಗಳು ಸಂಸತ್ತಿನ ಗಣನೀಯ ಕಾರ್ಯವನ್ನು ನಿರ್ವಹಿಸುತ್ತಿವೆ ಮತ್ತು ತಾರತಮ್ಯರಹಿತವಾಗಿ ಕೆಲಸ ಮಾಡುತ್ತಿವೆ ಎಂದು ನಾಯ್ಡು ತಿಳಿಸಿದರು.

ಸಂಸತ್ತಿನ ಕಾರ್ಯ ನಿರ್ವಹಣೆ ಉತ್ತಮಗೊಳ್ಳುವಂತಾಗಲು ವ್ಯವಸ್ಥೆಯಲ್ಲಿ ಹೆಚ್ಚಿನ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ತರಲು ಈ ಸಮಿತಿಗಳು ಕಾರ್ಯ ನಿರ್ವಹಿಸುತ್ತವೆ ಎಂದ ಅವರು, ಸಂಸದೀಯ ಸಮಿತಿಗಳು ತಮ್ಮ ರಚನೆಯ ಉದ್ದೇಶಕ್ಕೆ ನ್ಯಾಯವೊದಗಿಸುವಂತಾಗಲು ಈ ಸಮಿತಿಗಳ ಸಭೆಗಳಲ್ಲಿ ಉತ್ತಮ ಹಾಜರಾತಿಯನ್ನು ಖಚಿತಪಡಿಸುವಂತೆ ಎಲ್ಲ ಪಕ್ಷಗಳ ನಾಯಕರು,ಸದನ ನಾಯಕರು ಮತ್ತು ಸದಸ್ಯರಿಗೆ ತನ್ನ ಮನವಿಯನ್ನು ಪುನರುಚ್ಚರಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News