×
Ad

ಕೊರೋನಾಗೆ ಗೋಮೂತ್ರ, ಸಗಣಿ ಮದ್ದು: ಬಿಜೆಪಿ ಶಾಸಕಿಯ ‘ಸಂಶೋಧನೆ’!

Update: 2020-03-02 22:39 IST
Photo: Twitter@HaripriyaSuman

  ಹೊಸದಿಲ್ಲಿ,ಮಾ.2: ಜಗತ್ತಿನಾದ್ಯಂತ 3 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನ ವೈರಸ್ ರೋಗವನ್ನು ತಡೆಗಟ್ಟಲು ದನದ ಸೆಗಣಿ ನೆರವಾಗಬಲ್ಲದು ಎಂದು ಅಸ್ಸಾಂನ ಬಿಜೆಪಿ ಶಾಸಕಿಯೊಬ್ಬರು ಪ್ರತಿಪಾದಿಸಿದ್ದಾರೆ.

 ಜಾನುವಾರು ಕಳ್ಳಸಾಗಣೆ ಕುರಿತು ಸೋಮವಾರ ಅಸ್ಸಾಂ ವಿಧಾನಸಭಾ ಕಲಾಪದ ವೇಳೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹಾಜೋ ಕ್ಷೇತ್ರದ ಶಾಕಿ ಸುಮನ್ ಹರಿಪ್ರಿಯಾ ಅವರು, ‘‘ ಸರಕಾರವು ಗೋವಿನ ಸೆಗಣಿ ಹಾಗೂ ಗೋ ಮೂತ್ರದ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಗೋವಿನ ಸೆಗಣಿಯನ್ನು ಸುಟ್ಟಾಗ, ಹೊರ ಬರುವ ಹೊಗೆಯು ವೈರಸ್‌ನ್ನು ನಾಶಪಡಿಸುವ ಶಕ್ತಿ ಹೊಂದಿದೆ. ಕೊರೋನ ವೈರಸ್ ಹಾವಳಿಯನ್ನು ತಡೆಗಟ್ಟಲು ದನದ ಸೆಗಣಿ ನೆರವಾಗಬಲ್ಲದು ಎಂದು ನಾನು ನಂಬುತ್ತೇನೆ’’ ಎಂದು ಹೇಳದರು.

  ಪ್ರಥಮ ಬಾರಿಗೆ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿರುವ ಸುಮನ್ ಅವರು ಮಾಜಿ ಕೇಂದ್ರ ಸಚಿವ ಹಾಗೂ ಅಸ್ಸಾಂನ ಹಿರಿಯ ಬಿಜೆಪಿ ನಾಯಕ ಬಿಜೊಯಾ ಚಕ್ರವರ್ತಿ ಅವರ ಪುತ್ರಿಯಾಗಿದ್ದಾರೆ. ರಾಜಕೀಯ ಪ್ರವೇಶಿಸುವ ಮುನ್ನ ಅವರು ಸಿನೆಮಾ ನಿರ್ದೇಶಕಿಯಾಗಿದ್ದರು.

‘‘ದನದ ಸೆಗಣಿ ಹಾಗೂ ಗೋಮೂತ್ರವನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾಕೆ ಬಳಸಲಾಗುತ್ತಿದೆಯೆಂಬುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಗುಜರಾತ್‌ನ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಯುರ್ವೇದ ಔಷಧಿಗಳ ಮೂಲಕ ಚಿಕಿತ್ಸೆ ನೀಡ ಲಾಗುತ್ತಿದೆ. ಅಲ್ಲಿ ರೋಗಿಗಳನ್ನು ದನಗಳ ಸಮೀಪದಲ್ಲೇ ಇರಿಸಲಾಗುತ್ತದೆ ಹಾಗೂ ಗೋಮೂತ್ರ ಹಾಗೂ ಗೋವಿನ ಸಗಣಿಯಿಂದ ತಯಾರಿಸಲಾದ ಪಂಚಾಮೃತವನ್ನು ನೀಡಲಾಗುತ್ತಿದೆ” ಎಂದು ಶಾಸಕಿ ತಿಳಿಸಿದರು.

 ಗೋಮೂತ್ರ ಹಾಗೂ ಗೋವಿನ ಸೆಗಣಿಯ ಬಳಕೆಯಿಂದ ಪರ್ಯಾಯ ವಿಧಾನದ ಮೂಲಕ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಬಹುದಾಗಿದೆ ಎಂದು ಸುಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News