‘ಭಾರತ್ ಮಾತಾ ಕೀ ಜೈ’ ಮತ್ತು ಭಾರತದಲ್ಲಿ ಸಮಕಾಲೀನ ರಾಷ್ಟ್ರೀಯವಾದ

Update: 2020-03-03 18:08 GMT

ರಾಷ್ಟ್ರೀಯವಾದ ಹಾಗೂ ‘‘ಭಾರತ್ ಮಾತಾಕೀ ಜೈ’’ ಘೋಷಣೆಯನ್ನು ಮಿಲಿಯಗಟ್ಟಲೆ ಭಾರತೀಯರನ್ನು ಹೊರಗಿಡುವುದಕ್ಕಾಗಿ ‘‘ಭಾರತದ ಒಂದು ಮಿಲಿಟೆಂಟ್ ಹಾಗೂ ಭಾವನಾತ್ಮಕ’’ವಾದ ಚಿತ್ರವನ್ನು ರಚಿಸಲು ದುರುಪಯೋಗ ಪಡಿಸಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರಿಯಾಗಿಯೇ ಹೇಳಿದ್ದಾರೆ. ಪುರುಷೋತ್ತಮ್ ಅಗರವಾಲ್ ಮತ್ತು ರಾಧಾಕೃಷ್ಣ ಸಂಪಾದಿಸಿದ್ದ ‘ಹೂ ಈಸ್ ಭಾರತ್ ಮಾತಾ?’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸುತ್ತಾ ಡಾ. ಸಿಂಗ್ ಹೇಳಿರುವ ಮಾತು ವಿವೇಚನೀಯವಾಗಿದೆ.


ಬಹುತೇಕ ರಾಷ್ಟ್ರೀಯ ತತ್ವಗಳ, ಚಿಂತನೆಗಳ ಹಾಗೆ, ರಾಷ್ಟ್ರೀಯವಾದದ ಆಚರಣೆ ಕೂಡ ಜಡವಲ್ಲ. ಅದು ಬದಲಾಗುವ ರಾಜಕೀಯ ಶಕ್ತಿಗಳ ಬದಲಾಗುವ ರಾಜಕೀಯ ಸಮೀಕರಣಗಳೊಂದಿಗೆ ಬದಲಾಗುತ್ತದೆ ಮತ್ತು ವಿಭಿನ್ನ ಅಭಿವ್ಯಕ್ತಿಗಳನ್ನು ಪಡೆಯುತ್ತದೆ.

ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವು ರಾಜ್ಯಗಳ ನೀತಿಗಳಲ್ಲಿ ಒಂದಷ್ಟು ಬದಲಾವಣೆಯಾಗಿದೆ ಮತ್ತು ಆ ರಾಜ್ಯಗಳು, ಸರಕಾರ ರಾಷ್ಟ್ರೀಯವಾದದ ಅರ್ಥವನ್ನೇ ಬದಲಾಯಿಸಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ಅದು ರಾಷ್ಟ್ರೀಯವಾದದ ಅರ್ಥ ಹಾಗೂ ಅನುಷ್ಠಾನದಲ್ಲಿ ತೀವ್ರವಾದ ಬದಲಾವಣೆ ಕಾಣಿಸುವ ಅಂತಹ ರೀತಿಯಲ್ಲಿ ತನ್ನ ನೀತಿಗಳನ್ನು ರೂಪಿಸಿದೆ. ತನ್ನ ನಾಗರಿಕರಿಗೆ ನಿರ್ದಿಷ್ಟವಾಗಿ ಉದಾರವಾದಿಗಳ ಮತ್ತು ಮಾನವ ಹಕ್ಕುಗಳ ಪರವಾದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಈ ಬದಲಾವಣೆ ಕಾಣಿಸುತ್ತಿದೆ.

ರಾಷ್ಟ್ರೀಯವಾದ ಹಾಗೂ ‘‘ಭಾರತ್ ಮಾತಾಕೀ ಜೈ’’ ಘೋಷಣೆಯನ್ನು ಮಿಲಿಯಗಟ್ಟಲೆ ಭಾರತೀಯರನ್ನು ಹೊರಗಿಡುವುದಕ್ಕಾಗಿ ‘‘ಭಾರತದ ಒಂದು ಮಿಲಿಟೆಂಟ್ ಹಾಗೂ ಭಾವನಾತ್ಮಕ’’ವಾದ ಚಿತ್ರವನ್ನು ರಚಿಸಲು ದುರುಪಯೋಗ ಪಡಿಸಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರಿಯಾಗಿಯೇ ಹೇಳಿದ್ದಾರೆ. ಪುರುಷೋತ್ತಮ್ ಅಗರವಾಲ್ ಮತ್ತು ರಾಧಾಕೃಷ್ಣ ಸಂಪಾದಿಸಿದ್ದ ‘ಹೂ ಈಸ್ ಭಾರತ್ ಮಾತಾ?’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸುತ್ತಾ ಡಾ. ಸಿಂಗ್ ಹೇಳಿರುವ ಮಾತು ವಿವೇಚನೀಯವಾಗಿದೆ. ನೆಹರೂ ಅವರ ಬರಹಗಳ ಆಯ್ದ ಭಾಗಗಳ ಸಂಗ್ರಹ ಇದು.
‘‘ತನ್ನದೇ ಆದ ವಿಶಿಷ್ಟ ರೀತಿಯಲ್ಲಿ... ನೆಹರೂ ಅವರು ಆಧುನಿಕ ಭಾರತದ ವಿಶ್ವವಿದ್ಯಾನಿಲಯಗಳಿಗೆ, ಅಕಾಡಮಿಗಳಿಗೆ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ನೆಹರೂರವರ ನಾಯಕತ್ವದ ಹೊರತಾಗಿ ಸ್ವತಂತ್ರ ಭಾರತ ಇಂದು ಏನಾಗಿದೆಯೋ ಅದು ಆಗುವುದು ಸಾಧ್ಯವಿರಲಿಲ್ಲ’’ ಎಂದು ಕೂಡ ಡಾ. ಸಿಂಗ್ ಹೇಳಿದರು. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ನೆಹರೂರವರೇ ಕಾರಣವೆಂದು ಅವರನ್ನು ದೂಷಿಸುತ್ತಾ ಸರ್ದಾರ್ ಪಟೇಲ್‌ರನ್ನು ಹಿಂದೂ ರಾಷ್ಟ್ರೀಯವಾದಿಗಳು ವೈಭವೀಕರಿಸುತ್ತಿರುವ ಇಂದಿನ ದಿನಗಳಲ್ಲಿ ಡಾ. ಸಿಂಗ್ ಅವರ ಈ ಹೇಳಿಕೆಗೆ ತುಂಬಾ ಮಹತ್ವವಿದೆ.

ಡಾ. ಸಿಂಗ್ ಅವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸುತ್ತ, ಅವರು ಜೆಎನ್‌ಯು ಮತ್ತು ಜಾಮಿಯಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರ ಪಕ್ಷ ಭಾರತ ವಿರೋಧಿ ರಾಷ್ಟ್ರೀಯವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಹಿಂದೂ ರಾಷ್ಟ್ರೀಯವಾದಿಗಳು ಪ್ರತ್ಯುತ್ತರ ನೀಡಿದರು. ಅವರ ಪ್ರಕಾರ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯವಾದ (ನ್ಯಾಷನಲಿಸಂ) ಇಲ್ಲ. ಅವರು ನೀಡುವ ಇನ್ನೊಂದು ಉದಾಹರಣೆ: ಇತ್ತೀಚೆಗೆ ಶತ್ರುಘ್ನ ಸಿನ್ಹಾ ಪಾಕಿಸ್ತಾನಕ್ಕೆ ಖಾಸಗಿ ಭೇಟಿ ನೀಡಿದಾಗ ಅವರು ಪಾಕಿಸ್ತಾನದ ಅಧ್ಯಕ್ಷರೊಡನೆ ಮಾತುಕತೆ ನಡೆಸಿದ್ದು.

ಡಾ. ಸಿಂಗ್ ಅವರನ್ನು ವಿರೋಧಿಸಲು ಹಿಂದೂ ರಾಷ್ಟ್ರೀಯವಾದಿಗಳು ಬಳಸುವ ಬಹುತೇಕ ವಾದಗಳು ಹುರುಳಿಲ್ಲದವುಗಳು ‘‘ಭಾರತ್ ಮಾತಾ ಕೀ ಜೈ’’ ಘೋಷಣೆಯನ್ನು ಹಿಂದೂ ರಾಷ್ಟ್ರೀಯವಾದಿಗಳು ಧಾರ್ಮಿಕ ಅಲ್ಪಸಂಖ್ಯಾತರನ್ನು ಬೆದರಿಸಲು ಹೇಗೆ ತಿರುಚಿದ್ದಾರೆ ಎನ್ನುವುದನ್ನು ಡಾ. ಸಿಂಗ್ ಹೇಳುತ್ತಿದ್ದಾರೆ. ಅವರು ಭಾರತದ ರಾಷ್ಟ್ರೀಯವಾದವನ್ನಾಗಲೀ ಅಥವಾ ವಸಾಹತುಶಾಹಿಗಳ ವಿರುದ್ಧ ನಾವು ನಡೆಸಿದ್ದ ಹೋರಾಟಗಳ ಮುಖ್ಯ ಮೌಲ್ಯಗಳನ್ನಾಗಲೀ ವಿರೋಧಿಸಿ ಮಾತನಾಡುತ್ತಿಲ್ಲ.

ಭಾರತ ಒಂದು ರಾಷ್ಟ್ರವಾಗಿ ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೌಲ್ಯಗಳನ್ನಾಧರಿಸಿ ಅಸ್ತಿತ್ವಕ್ಕೆ ಬಂತು. ಈ ಮೌಲ್ಯಗಳು ಹಿಂದೂ ಅಥವಾ ಮುಸ್ಲಿಮ್ ರಾಷ್ಟ್ರೀಯವಾದದ ಪರಿಕಲ್ಪನೆಗಳಿಂದ ದೂರವಾಗಿರುವ ಮೌಲ್ಯಗಳು. ಆದ್ದರಿಂದ ನಮ್ಮ ದೇಶವನ್ನು ‘ಇಂಡಿಯಾ ದ್ಯಾಟ್ ಈಸ್ ಭಾರತ್’ ಎಂದು ಕರೆಯಲಾಯಿತು. ನಮ್ಮ ಸಂವಿಧಾನವು ವೈವಿಧ್ಯವನ್ನು ಗೌರವಿಸಿ, ಯಾವುದೇ ಒಂದು ಸಂಸ್ಕೃತಿಯನ್ನು ಆಧರಿಸಿದ ನಿಯಮಗಳನ್ನು ಮೌಲ್ಯಗಳನ್ನು ರೂಪಿಸಿತು. ಸಾಂಸ್ಕೃತಿಕ ವೈವಿಧ್ಯವನ್ನು, ಆದ್ಯತೆ ಹಾಗೂ ಬಹುತ್ವವನ್ನು ನಮ್ಮ ಸಂವಿಧಾನ ಬಹಳ ಮುಖ್ಯವಾಗಿ ಗುರುತಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಭಾರತದ ಪ್ರಜಾಪ್ರಭುತ್ವದ ತಿರುಳು ಎಂದು ತಿಳಿದಿರುವ ಕಾರಣಕ್ಕಾಗಿಯೇ ಜೆಎನ್‌ಯು, ಜಾಮಿಯಾ ಹಾಗೂ ಎಎಂಯುಗಳನ್ನು ದಾಳಿಗೆ ಗುರಿ ಮಾಡಲಾಗಿದೆ. ಈ ಸಂಸ್ಥೆಗಳ ಚಾರಿತ್ರ್ಯ ಹನನ ಮಾಡುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಕೆಲವು ಘೋಷಣೆಗಳನ್ನು ಸೃಷ್ಟಿಸಲಾಗಿದೆ. ‘ಪಾಕಿಸ್ತಾನ ವಿರೋಧಿ ಸನ್ನಿ’ಯನ್ನು ಸೃಷ್ಟಿಸುವುದೇ ನಮ್ಮ ಮಾಧ್ಯಮಗಳಲ್ಲಿ ಕೆಲವು ಚಾನೆಲ್‌ಗಳ ಕೆಲಸವಾಗಿದೆ. ಈ ಮಾಧ್ಯಮಗಳು ಆಳುವ ಸರಕಾರದ ಕೈಗೊಂಬೆಗಳಾಗಿವೆ.

ಕಳೆದ ಆರು ವರ್ಷಗಳಲ್ಲಿ ಉಸಿರುಗಟ್ಟಿಸುವ ಒಂದು ವಾತಾವರಣವನ್ನು ಸೃಷ್ಟಿಸಲಾಗಿದೆ. ಈ ವಾತಾವರಣದಲ್ಲಿ ಪ್ರಧಾನಿ ಅವರು ತನ್ನ ಪ್ರಯಾಣ ಮಾರ್ಗವನ್ನು ದಿಢೀರನೆ ಬದಲಿಸಿ ಪಾಕಿಸ್ತಾನದ ಪ್ರಧಾನಿಯವರ ಜೊತೆ ಚಹಾ ಸೇವಿಸಬಹುದು. ಆದರೆ ಓರ್ವ ಕಾಂಗ್ರೆಸ್ ನಾಯಕ ಪಾಕಿಸ್ತಾನದ ಅಧ್ಯಕ್ಷರೊಡನೆ ಮಾತಾಡುವುದು ದೇಶದ್ರೋಹದ ಸಂಕೇತವಾಗಿದೆ. ಭಾರತದ ಸಂವಿಧಾನ ಪೀಠಿಕೆಯನ್ನೋದುತ್ತ ಮೆರವಣಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹಿಗಳೆಂದು ಕರೆಯಲಾಗುತ್ತದೆ.

ಇಂದು ಪ್ರಬಲವಾಗಿರುವ ಹಿಂದುತ್ವದ ರಾಷ್ಟ್ರೀಯವಾದ ಭ್ರಾತೃತ್ವವನ್ನು ದುರ್ಬಲಗೊಳಿಸಿದೆ. ಆದರೆ ದೇಶದ ಬಹುತೇಕ ಜನರು ಗಾಂಧಿ, ನೆಹರೂ, ಪಟೇಲ್ ಹಾಗೂ ಮೌಲಾನಾ ಆಝಾದ್ ಅವರ ರಾಷ್ಟ್ರೀಯವಾದದ ಪರವಾಗಿ ಇದ್ದಾರೆ. ಈ ರಾಷ್ಟ್ರೀಯವಾದದಲ್ಲಿ ಅಲ್ಪಸಂಖ್ಯಾತರು ಎಲ್ಲರಿಗೂ ಸಮಾನರಾದ ನಾಗರಿಕರು. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಇದನ್ನು, ತಮ್ಮ ನೀತಿಗಳ ಟೀಕೆಯನ್ನು ಒಪ್ಪಲು ಸಿದ್ಧರಿಲ್ಲ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News