ಕೊರೋನವೈರಸ್: ಅಮೆರಿಕದಲ್ಲಿ ಇನ್ನೂ 3 ಸಾವು
ವಾಶಿಂಗ್ಟನ್, ಮಾ. 4: ಕೊರೋನವೈರಸ್‌ನಿಂದಾಗಿ ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿ ಮಂಗಳವಾರ ಇನ್ನೂ ಮೂರು ಸಾವುಗಳು ಸಂಭವಿಸಿವೆ. ಇದರೊಂದಿಗೆ ಅಮೆರಿಕದಲ್ಲಿ ಈ ಮಾರಕ ಕಾಯಿಲೆಗೆ ಬಲಿಯಾದವರ ಸಂಖ್ಯೆ 9ಕ್ಕೇರಿದೆ.
ಎಲ್ಲಾ ಸಾವುಗಳು ವಾಶಿಂಗ್ಟನ್ ರಾಜ್ಯದಲ್ಲೇ ಸಂಭವಿಸಿದೆಯಾದರೂ, ರೋಗವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಈವರೆಗಿನ ಸಾವುಗಳು ಮತ್ತು ಸೋಂಕುಗಳು ವಾಶಿಂಗ್ಟನ್ ರಾಜ್ಯದ ಸಿಯಾಟಲ್ ಪ್ರದೇಶಕ್ಕೆ ಸೀಮಿತವಾಗಿದ್ದವು. ಈಗ ನಾರ್ತ್ ಕ್ಯಾರಲೈನ್ ರಾಜ್ಯದ ನಿವಾಸಿಯೊಬ್ಬರಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾಗಿದೆ.
ಅವರು ವಾಶಿಂಗ್ಟನ್ ರಾಜ್ಯದಿಂದ ವಾಪಸಾದ ಬಳಿಕ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಅವರು ಇತ್ತೀಚೆಗೆ ಸಿಯಾಟಲ್ ನಗರದ ಉಪ ನಗರವೊಂದರ ಆಸ್ಪತ್ರೆಯೊಂದಕ್ಕೆ ಹೋಗಿದ್ದಾಗ ಅವರಿಗೆ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಸಿಯಾಟಲ್ ನಗರದಲ್ಲಿ ಅತಿ ಹೆಚ್ಚಿನ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗಿವೆ.
ಗ್ರೇಟರ್ ಸಿಯಾಟಲ್ ಪ್ರದೇಶದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 27ಕ್ಕೆ ಏರಿದೆ. ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಮವಾರ ಈ ಸಂಖ್ಯೆ 18 ಆಗಿತ್ತು