ಪೌರತ್ವ ತಿದ್ದುಪಡಿ ಕಾಯ್ದೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಬ್ರಿಟನ್ ಸರಕಾರ ಕಳವಳ

Update: 2020-03-04 15:49 GMT
file photo

ಲಂಡನ್,ಮಾ.4: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಸಂಭಾವ್ಯ ಪರಿಣಾಮ ಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಬ್ರಿಟನ್ ಸರಕಾರವು,ಭಾರತದಲ್ಲಿನ ಘಟನಾವಳಿಗಳನ್ನು ತಾನು ನಿಕಟವಾಗಿ ಗಮನಿಸುತ್ತಿದ್ದೇನೆ ಎಂದು ಹೇಳಿದೆ.

 ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ‘ಭಾರತದಲ್ಲಿನ ಇತ್ತೀಚಿನ ಹಿಂಸಾಚಾರ’ ಕುರಿತು ತುರ್ತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯ ಸಹಾಯಕ ಸಚಿವ ನಿಗೆಲ್ ಆ್ಯಡಮ್ಸ್ ಅವರು,ಮಾನವ ಹಕ್ಕುಗಳು ಸೇರಿದಂತೆ ಎಲ್ಲ ಮಟ್ಟಗಳಲ್ಲಿ ಬ್ರಿಟನ್ ಭಾರತದೊಂದಿಗೆ ತೊಡಗಿಸಿ ಕೊಂಡಿದೆ ಎಂದು ತಿಳಿಸಿದರು. ಧಾರ್ಮಿಕ ಸಹಿಷ್ಣುತೆಯ ದೇಶದ ಹೆಮ್ಮೆಯ ಇತಿಹಾಸವನ್ನೂ ಪ್ರಸ್ತಾಪಿಸಿದ ಅವರು,ಸಿಎಎಯ ಸಂಭಾವ್ಯ ಪರಿಣಾಮಗಳ ಬಗ್ಗೆಯೂ ಬ್ರಿಟನ್ ಸರಕಾರವು ಕಳವಳಗೊಂಡಿದೆ ಎಂದರು.

 ‘ನಾವು ಭಾರತ ಸರಕಾರದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ ಕಠಿಣ ವಿಷಯಗಳನ್ನೂ ಅದರೊಂದಿಗೆ ಚರ್ಚಿಸಲು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸೇರಿದಂತೆ ನಮ್ಮ ಕಳವಳಗಳನ್ನು ಅದಕ್ಕೆ ಸ್ಪಷ್ಟಪಡಿಸಲು ನಮಗೆ ಸಾಧ್ಯವಿದೆ. ಅಲ್ಲಿಯ ಬೆಳವಣಿಗೆಗಳ ಮೇಲೆ ನಿಕಟ ನಿಗಾವನ್ನು ನಾವು ಮುಂದುವರಿಸುತ್ತೇವೆ ಮತ್ತು ನಮ್ಮ ಕಳವಳಗಳಿದ್ದಾಗ ಅವುಗಳನ್ನು ತಿಳಿಸುತ್ತೇವೆ ’ಎಂದು ಆಡಮ್ಸ್ ಹೇಳಿದರು.

ದಿಲ್ಲಿ ಹಿಂಸಾಚಾರವು ತಾನು ಹಿಂದೆ ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಡೆದಿದ್ದ 1984ರ ಸಿಖ್ ಹತ್ಯಾಕಾಂಡದ ತನ್ನ ವೈಯಕ್ತಿಕ ಯಾತನಾಮಯ ನೆನಪುಗಳನ್ನು ಮರುಕಳಿಸಿದೆ ಎಂದು ಬ್ರಿಟಿಷ್ ಸಿಖ್ ಲೇಬರ್ ಸಂಸದ ತನ್ಮನ್‌ಜೀತ್ ಸಿಂಗ್ ಧೇಸಿ ಹೇಳಿದರೆ, ಅವರ ಸಹೋದ್ಯೋಗಿ ಸಿಖ್ ಸಂಸದೆ ಪ್ರೀತ್ ಕೌರ್ ಗಿಲ್ ಕೂಡ ಸಿಖ್ ನರಮೇಧವನ್ನು ಪ್ರಸ್ತಾಪಿಸಿದರು.

ದಿಲ್ಲಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಮರಳಿಸಲು ಭಾರತೀಯ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಬಿಂಬಿಸಲು ಇತರ ಸಂಸದರು ಬಯಸಿದರು. ದಂಗೆಗಳಲ್ಲಿ ಮುಸ್ಲಿಮರು ಮಾತ್ರವಲ್ಲ,ಹಿಂದುಗಳೂ ಕೊಲ್ಲಲ್ಪಟ್ಟಿದ್ದಾರೆ ಎಂದು ಕನ್ಸರ್ವೇಟಿವ್ ಪಕ್ಷದ ಸಂಸದ ಬಾಬ್ ಬ್ಲಾಕ್‌ಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News