ದಿಲ್ಲಿಯಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರ ಖಂಡಿಸಿದ ಪಾಕಿಸ್ತಾನ್ ಹಿಂದೂ ಕೌನ್ಸಿಲ್

Update: 2020-03-04 16:16 GMT

ಕರಾಚಿ (ಪಾಕಿಸ್ತಾನ), ಮಾ. 4: ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಭಾರತದ ಮುಸ್ಲಿಮ್ ಅಲ್ಪಸಂಖ್ಯಾತರನ್ನು ‘ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದನ್ನು’ ಪಾಕಿಸ್ತಾನ್ ಹಿಂದೂ ಕೌನ್ಸಿಲ್ (ಪಿಎಚ್‌ಸಿ) ಮುಖ್ಯಸ್ಥ ಡಾ. ರಮೇಶ್ ಕುಮಾರ್ ಖಂಡಿಸಿದ್ದಾರೆ.

 ಹಿಂಸಾಚಾರದ ವೀಡಿಯೊಗಳು ಹೃದಯವಿದ್ರಾವಕವಾಗಿದೆ ಎಂದು ಡಾ. ಕುಮಾರ್ ಬಣ್ಣಿಸಿದರು. “ಭಾರತೀಯ ಮುಸ್ಲಿಮರ ಅಸಹಾಯಕತೆಯನ್ನು ಕಂಡು ನಾವು ತೀವ್ರವಾಗಿ ಆತಂಕಿತರಾಗಿದ್ದೇವೆ” ಎಂದು ಹೇಳಿದ ಅವರು, ಭಾರತದಲ್ಲಿ ನಡೆಯುತ್ತಿರುವ ತಲ್ಲಣಗಳ ಬಗ್ಗೆ ಗಮನ ಹರಿಸುವಂತೆ ಅವರು ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.

ಅದೇ ವೇಳೆ, ಹಿಂಸಾ ಕೃತ್ಯಗಳಲ್ಲಿ ತೊಡಗಿರುವ ಗುಂಪುಗಳು ಧಾರ್ಮಿಕ ಘೋಷಣೆಗಳನ್ನು ಕೂಗುವುದಕ್ಕೆ ಕೌನ್ಸಿಲ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘‘ಹಿಂಸಾಕೃತ್ಯಗಳಲ್ಲಿ ತೊಡಗಿರುವ ದುಷ್ಕರ್ಮಿಗಳು ‘ಜೈಶ್ರೀರಾಮ್’ ಎಂಬ ಘೋಷಣೆ ಕೂಗುತ್ತಾರೆ. ಅವರು ಮೊದಲು ರಾಮಾಯಣ ಓದುವುದು ಒಳಿತು. ಅಮಾಯಕರನ್ನು ಇಂಥ ಭಯಾನಕ ಹಿಂಸೆಗಳಿಗೆ ಗುರಿಪಡಿಸುವಂತೆ ರಾಮಾಯಣ ಯಾವಾಗ ಹೇಳಿದೆ?’’ ಎಂದು ಡಾ. ಕುಮಾರ್ ಪ್ರಶ್ನಿಸಿದರು.

ವಾಸ್ತವವಾಗಿ, ಜಗತ್ತಿನ ಪ್ರತಿಯೊಂದು ಧರ್ಮವು ಮಾನವೀಯತೆಯನ್ನು ಕಲಿಸಿದೆ ಹಾಗೂ ಇತರ ಧರ್ಮಗಳನ್ನು ಗೌರವಿಸಬೇಕೆಂದು ಹೇಳುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News