×
Ad

ತಾಲಿಬಾನ್ ಮೇಲೆ ಅಮೆರಿಕ ಸೇನೆಯಿಂದ ವಾಯು ದಾಳಿ: ಶಾಂತಿ ಒಪ್ಪಂದ ನಡೆದ ಕೆಲವೇ ದಿನಗಳಲ್ಲಿ ಬೆಳವಣಿಗೆ

Update: 2020-03-04 22:02 IST

ಕಾಬೂಲ್ (ಅಫ್ಘಾನಿಸ್ತಾನ), ಮಾ. 4: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಅಮೆರಿಕ ಸೇನೆ ಬುಧವಾರ ವಾಯು ದಾಳಿ ನಡೆಸಿದೆ. ತಾಲಿಬಾನ್‌ನ ಓರ್ವ ನಾಯಕನೊಂದಿಗೆ ‘ಉತ್ತಮ ಮಾತುಕತೆ ನಡೆಸಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಗಂಟೆಗಳ ಬಳಿಕ ದಾಳಿ ಸಂಭವಿಸಿದೆ.

18 ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಶಾಂತಿ ಒಪ್ಪಂದವೊಂದಕ್ಕೆ ಅಮೆರಿಕ ಮತ್ತು ತಾಲಿಬಾನ್ ಶನಿವಾರವಷ್ಟೇ ಸಹಿ ಹಾಕಿದ್ದವು.

ಆದರೆ, ಹೆಲ್ಮಂಡ್ ಪ್ರಾಂತದಲ್ಲಿ ತಾಲಿಬಾನಿಗರು ಅಫ್ಘಾನ್ ಪಡೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಬುಧವಾರ ತಾಲಿಬಾನ್ ವಿರುದ್ಧ ವಾಯು ದಾಳಿ ನಡೆಸಿರುವುದಾಗಿ ಅಮೆರಿಕ ಪಡೆಗಳ ವಕ್ತಾರರೊಬ್ಬರು ತಿಳಿಸಿದರು.

ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಾಯು ದಾಳಿಯಲ್ಲಿ ಸಾವು-ನೋವು ಸಂಭವಿಸಿದೆಯೇ ಎನ್ನುವುದು ತಿಳಿದುಬಂದಿಲ್ಲ.

ಬುಧವಾರದ ದಾಳಿ, 11 ದಿನಗಳಲ್ಲಿ ಅಮೆರಿಕವು ತಾಲಿಬಾನ್ ವಿರುದ್ಧ ನಡೆಸಿದ ಮೊದಲ ದಾಳಿಯಾಗಿದೆ.

ಅಫ್ಘಾನ್ ರಾಷ್ಟ್ರೀಯ ಭದ್ರತ ಪಡೆಗಳ ತಪಾಸಣಾ ಠಾಣೆಯ ಮೇಲೆ ತಾಲಿಬಾನ್ ನಡೆಸಿದ ದಾಳಿಯನ್ನು ಚದುರಿಸುವುದಕ್ಕಾಗಿ ನಡೆಸಿದ ‘ರಕ್ಷಣಾತ್ಮಕ ದಾಳಿ’ ಅದಾಗಿತ್ತು ಎಂದು ಟ್ವಿಟರ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳ ವಕ್ತಾರ ಕರ್ನಲ್ ಸಾನಿ ಲೆಗಿಟ್ ಹೇಳಿದ್ದಾರೆ.

ಅಫ್ಘಾನ್ ಸೈನಿಕರ ನೆಲೆಗಳ ಮೇಲೆ 10ಕ್ಕೂ ಅಧಿಕ ಬಾರಿ ತಾಲಿಬಾನ್ ದಾಳಿ

ಆಂಶಿಕ ಯುದ್ಧವಿರಾಮ ಕೊನೆಗೊಂಡ ಬಳಿಕ, ತಾಲಿಬಾನ್ ಉಗ್ರರು ಅಫ್ಘಾನ್ ಸೇನಾ ಪಡೆಗಳ ನೆಲೆಗಳ ಮೇಲೆ 10ಕ್ಕೂ ಅಧಿಕ ಬಾರಿ ದಾಳಿಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದರೊಂದಿಗೆ, ಅಫ್ಘಾನ್ ಸರಕಾರ ಮತ್ತು ತಾಲಿಬಾನ್ ಉಗ್ರರ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ.

ಕತರ್ ರಾಜಧಾನಿ ದೋಹಾದಲ್ಲಿ ಶನಿವಾರ ಅಮೆರಿಕ ಮತ್ತು ತಾಲಿಬಾನ್ ಹಾಕಿರುವ ಶಾಂತಿ ಒಪ್ಪಂದದ ಪ್ರಕಾರ, ಅಫ್ಘಾನ್ ಸರಕಾರ ಮತ್ತು ತಾಲಿಬಾನಿಗಳ ನಡುವಿನ ಸಂಧಾನ ಮಾತುಕತೆ ಮಾರ್ಚ್ 10ರಂದು ಆರಂಭಗೊಳ್ಳಬೇಕಿದೆ. ಆದರೆ, ಕೈದಿಗಳ ವಿನಿಮಯದ ಬಗ್ಗೆ ಎದ್ದಿರುವ ವಿವಾದದಿಂದಾಗಿ, ಮಾತುಕತೆ ನಡೆಯುವುದೇ ಎಂಬ ಬಗ್ಗೆ ಅನುಮಾನ ತಲೆದೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News