ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ವೀಸಾ ರದ್ದು: ಹೈಕೋರ್ಟ್ ಮೆಟ್ಟಿಲೇರಿದ ಪೋಲಂಡ್ ವಿದ್ಯಾರ್ಥಿ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇತ್ತೀಚೆಗೆ ಪೋಲೆಂಡ್ ದೇಶದ ವಿದ್ಯಾರ್ಥಿಯ ವೀಸಾ ರದ್ದಾಗಿದ್ದು, ಇದೀಗ ಈ ವಿದ್ಯಾರ್ಥಿ ಕೊಲ್ಕತ್ತಾ ಹೈಕೋರ್ಟಿನ ಮೊರೆ ಹೋಗಿದ್ದಾರೆ. ತನ್ನ ವಿರುದ್ಧದ ಆದೇಶ ವಾಪಸ್ ಪಡೆಯುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಕೋರಿದ್ದಾರೆ.
ಸರಕಾರದ ಆದೇಶ ಜಾರಿಗೊಳಿಸುವುದಕ್ಕೆ ತಡೆ ಹೇರಬೇಕೆಂದು ಅಪೀಲುದಾರ ವಿದ್ಯಾರ್ಥಿ ಕಾಮಿಲ್ ಸೀಡ್ ಸಿನ್ಸ್ಕಿ ಮನವಿ ಮಾಡಿದ್ದಾರೆ. ವೀಸಾ ನಿಯಮ ಉಲ್ಲಂಘಿಸಿ 'ಸರಕಾರಿ ವಿರೋಧಿ ಚಟುವಟಿಕೆಗಳಿಗಾಗಿ' 14 ದಿನಗಳೊಳಗಾಗಿ ದೇಶ ಬಿಟ್ಟು ತೆರಳುವಂತೆ ಕಳೆದ ವಾರ ಅವರಿಗೆ ಜಾರಿಗೊಳಿಸಿದ್ದ ನೋಟಿಸಿನಲ್ಲಿ ಫಾರಿನ್ ರೀಜನಲ್ ರಿಜಿಸ್ಟ್ರೇಶನ್ ಆಫೀಸ್ ತಿಳಿಸಿತ್ತು.
ಜಾಧವ್ ಪುರ್ ವಿವಿಯ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಡಿಸೆಂಬರ್ 19ರಂದು ಕೊಲ್ಕತ್ತಾದ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೀಡ್ ಸಿನ್ಸ್ಕಿ ಭಾಗವಹಿಸಿದ್ದರು ಎಂದು ಅವರ ವಕೀಲ ಜಯಂತ್ ಮಿತ್ರಾ ಹೈಕೋರ್ಟಿಗೆ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಂದ ಹೊರ ಬಂದು ಬದಿಯಲ್ಲಿ ನಿಂತಿದ್ದಾಗಿಯೂ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.