×
Ad

ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ 7 ಕಾಂಗ್ರೆಸ್ ಸಂಸದರನ್ನು ವಜಾಗೊಳಿಸಿದ ಸ್ಪೀಕರ್

Update: 2020-03-05 16:44 IST

ಹೊಸದಿಲ್ಲಿ,ಮಾ.5: ದಿಲ್ಲಿ ಹಿಂಸಾಚಾರದ ಕುರಿತಾದ ಚರ್ಚೆಯ ವೇಳೆ ಕಳೆದ ಮೂರು ದಿನಗಳಿಂದ ಲೋಕಸಭೆಯಲ್ಲಿ ಗದ್ದಲವನ್ನು ಸೃಷ್ಟಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಏಳು ಮಂದಿ ಸದಸ್ಯರನ್ನು ಹಾಲಿ ಬಜೆಟ್ ಅಧಿವೇಶನದ ಉಳಿದ ಅವಧಿಯವರೆಗೆ ಅಮಾನತು ಗೊಳಿಸಲಾಗಿದೆ. ಗೌರವ್ ಗೊಗೋಯಿ, ಟಿ.ಎನ್.ಪ್ರತಾಪನ್, ಡೀನ್ ಕುರಿಯಾಕೋಸ್, ಬೆನ್ನಿ ಬೆಹನಮ್ ಮಾಣಿಕ್ಯಂ ಟಾಗೋರ್, ರಾಜಮೋಹನ್ ಉನ್ನಿತಾನ್ ಹಾಗೂ ಗುರುಜಿತ್ ಸಿಂಗ್ ಲೋಕಸಭೆಯ ಬಜೆಟ್ ಅಧಿವೇಶನ ಉಳಿದ ಅವದಿಗೆ ಅಮಾನತುಗೊಂಡ ಕಾಂಗ್ರೆಸ್ ಸಂಸದರಾಗಿದ್ದಾರೆ.

  ಈ ಸಂಸದರ ದುರ್ನಡತೆಗಾಗಿ ಅವರನ್ನು ಲೋಕಸಭಾ ಸದಸ್ಯತ್ವ್ವದಿಂದ ಅನರ್ಹಗೊಳಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಬೇಕೆಂಬ ಕೇಂದ್ರ ಸರಕಾರದ ಬೇಡಿಕೆಗೆೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರು ಸಮ್ಮತಿಸಿದ್ದಾರೆ.

    ಸದನ ಕಲಾಪದ ವೇಳೆ ಭಾರೀ ಗದ್ದಲವೆಬ್ಬಿಸಿದ ಈ ಸಂಸದರು ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರ ಮೇಜಿನಿಂದ ಕಾಗದ ಪತ್ರಗಳನ್ನು ಕಿತ್ತುಕೊಂಡಿದ್ದಲ್ಲದೆ, ಸದನ ನಿಯಮಗಳಿಗೆ ಅತ್ಯಂತ ಅಗೌರವದಿಂದ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಏಳು ಮಂದಿ ಸದಸ್ಯರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿತು.

‘ ಸ್ಪೀಕರ್‌ ಅವರ ಮೇಜಿನಿಂದ ಕಾಗದಪತ್ರಗಳನ್ನು ಕಿತ್ತುಕೊಳ್ಳುವುದು, ಸಭಾಧ್ಯಕ್ಷರ ಪೀಠಕ್ಕೆ ತೋರಿದ ಘೋರ ಅಗೌರವವಾಗಿದೆ. ಸಭಾಧ್ಯಕ್ಷರ ಮೇಜಿನಿಂದ ಕಾಗದಪತ್ರಗಳನ್ನು ಕಸಿದುಕೊಂಡವರ ಸದಸ್ಯತ್ವವನ್ನು ರದ್ದುಪಡಿಸಬೇಕು’’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

   ಎರಡನೆ ಹಂತದ ಬಜೆಚ್ ಅಧಿವೇಶನವು ಸೋಮವಾರ ಆರಂಭಗೊಂಡಿದ್ದು, ಎಪ್ರಿಲ್ 3ರಂದು ಕೊನೆಗೊಳ್ಳಲಿದೆ. ತನ್ನ ಪಕ್ಷದ ಏಳು ಸಂಸದರ ಅಮಾನತು ಕ್ರಮವು ಸೇಡಿನ ರಾಜಕೀಯವೆಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಹೋರಾಟವನ್ನು ತನ್ನ ಪಕ್ಷವು ಕೈಬಿಡಲಾರದು ಎಂದು ಹೇಳಿದ್ದಾರೆ.

   ‘‘ಕಾಂಗ್ರೆಸ್‌ನ 7 ಸಂಸದರ ಅಮಾನತು ಕ್ರಮವು ಸರಕಾರದ ನಿರ್ಧಾರವಾಗಿದೆಯೇ ಹೊರತು ಸ್ಪೀಕರ್ ಅವರದ್ದಲ್ಲ ಇದು ಯಾವ ರೀತಿಯ ನಿರಂಕುಶಾಡಳಿತ?” ಎಂದು ಅಧೀರ್ ರಂಜನ್ ಚೌಧುರಿ ಕಿಡಿಕಾರಿದರು.

  ‘‘ಸಂಸದರ ಅಮಾನತು ಕ್ರಮವು ಪ್ರತಿಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನವೆಂದು ಆಪಾದಿಸಿದ ಅವರು, ಲೋಕಸಭೆಯಲ್ಲಿ ದಿಲ್ಲಿ ಗಲಭೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರ ಅಂಜುತ್ತಿದೆ’’ಎಂದು ಅವರು ಟೀಕಿಸಿದರು.

ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಕಳೆದ ಮೂರು ದಿನಗಳಿಂದ ಲೋಕಸಭೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರವೇರ್ಪಟ್ಟಿದ್ದರಿಂದ ಕಲಾಪ ನಡೆಸುವುದೇ ಕಷ್ಟವಾಗಿ ಸ್ಪೀಕರ್ ಅವರು ಸದನವನ್ನು ಹಲವಾರು ಬಾರಿ ಮುಂದೂಡಬೇಕಾಯಿತು.

ಮಂಗಳವಾರ ಹಾಗೂ ಬುಧವಾರದಂದು ಸದನದಲ್ಲಿ ಗದ್ದಲ ತಾರಕಕ್ಕೇರಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಪರಸ್ಪರ ತಳ್ಳಾಟ, ಜಗ್ಗಾಟ ನಡೆದಿತ್ತು ಹಾಗೂ ಕಾಗದ ಪತ್ರಗಳನ್ನು ಆಸನಗಳ ಮೇಲೆ ಎಸೆಯಲಾಗಿತ್ತು.

  ಸೋಮವಾರ ಸದನದಲ್ಲಿ ಭಾರೀ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ, ಸ್ಪೀಕರ್ ಓಂ ಬಿರ್ಲಾ ಅವರು ಕಲಾಪಗಳ ಸುಗಮನಿರ್ವಹಣೆಗಾಗಿ ಕೆಲವು ಮೂಲಭೂತ ನಿಯಮಾವಳಿಗಳನ್ನು ರೂಪಿಸಲು ಸ್ಪೀಕರ್ ಓಂ ಬಿರ್ಲಾ ಅವರು ಸರ್ವ ಪಕ್ಷ ಸಭೆಯನ್ನು ನಡೆಸಿದ್ದರು. ಮಂಗಳವಾರದಂದು ಮತ್ತೆ ಸದನದಲ್ಲಿ ಹೊಕೈ ನಡೆದಿದ್ದರಿಂದ ಆಕ್ರೋಶಗೊಂಡ ಸ್ಪೀಕರ್ ಅವರು, ಪ್ರತಿಪಕ್ಷ ಹಾಗೂ ಆಳುವ ಪಕ್ಷ ಸದಸ್ಯರು ತಮ್ಮ ಬೆಂಚುಗಳನ್ನು ದಾಟಿ ಬಂದು ದುಂಡಾವರ್ತನೆಯಲ್ಲಿ ತೊಡಗಿದಲ್ಲಿ ಅವರನ್ನು ಇಡೀ ಬಜೆಟ್ ಅಧಿವೇಶನಕ್ಕೆ ಉಚ್ಚಾಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News