ಮಂಗಳೂರು: ಕಾರ್ಮಿಕರ ಹೊರಗುತ್ತಿಗೆ ರದ್ದತಿಗಾಗಿ ಗಡುವು ನೀಡಿದ ಡಿಎಸ್‌ಎಸ್

Update: 2020-03-05 14:10 GMT

ಮಂಗಳೂರು, ಮಾ.5: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಳಚರಂಡಿ ವಿಭಾಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರಿಯಾದ ವೇತನ, ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಈ ಕಾರ್ಮಿಕರ ಹೊರಗುತ್ತಿಗೆಯನ್ನು ರದ್ದುಗೊಳಿಸಲು ಆಗ್ರಹಿಸಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ, ಕಾರ್ಮಿಕರ ಹೊರಗುತ್ತಿಗೆ ರದ್ದುಗೊಳಿಸಿ, ಪಾಲಿಕೆ ಅಧೀನದಲ್ಲಿ ಕರ್ತವ್ಯ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸಲು ಒಂದು ವಾರದ ಗಡುವು ವಿಧಿಸಿದೆ. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ 134 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ವ್ಯವಸ್ಥೆ ರದ್ದುಗೊಳಿಸುವಂತೆ ಸ್ಥಳೀಯಾಡಳಿತ, ಸರಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಬಂದಿಲ್ಲ. ಹಾಗಾಗಿ ಹೋರಾಟಕ್ಕೆ ಇಳಿಯಲು ನಿರ್ಧರಿಸಿದ್ದಾಗಿಯೂ ಅವರು ಸ್ಪಷ್ಟಪಡಿಸಿದರು.

ಪಾಲಿಕೆಯು ಕಾರ್ಮಿಕರ ಹೊರಗುತ್ತಿಗೆಯನ್ನು ಎಸ್‌ಇಝಡ್ ಎಂಬ ಕಂಪೆನಿಗೆ ನೀಡಿದ್ದು, ಈ ಸಂಸ್ಥೆಯು ಖಾಸಗಿ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಉಪಗುತ್ತಿಗೆ ನೀಡಿದೆ. ಹೊರಗುತ್ತಿಗೆ ಸಂಸ್ಥೆಯು ಪ್ರತಿ ಕಾರ್ಮಿಕರಿಗೆ ಮಾಸಿಕ 20 ಸಾವಿರ ರೂ. ವೇತನದ ಲೆಕ್ಕ ನೀಡುತ್ತಿದೆ. ಆದರೆ ಕಾರ್ಮಿಕರಿಗೆ ಕೊಡುವುದು ಕೇವಲ 10 ಸಾವಿರದಿಂದ 13,500 ರೂ. ಮಾತ್ರ. ಪ್ರತಿ ತಿಂಗಳು ಹೊರಗುತ್ತಿಗೆ ಸಂಸ್ಥೆಯು ಲಕ್ಷಾಂತರ ರೂ.ನ್ನು ಕಾರ್ಮಿಕರಿಗೆ ನೀಡದೆ ವಂಚಿಸುತ್ತಿದೆ. ಗುತ್ತಿಗೆ ಷರತ್ತಿನ ಅಡಿಯಲ್ಲಿ ಕಾರ್ಮಿಕರಿಗೆ ನೀಡಬೇಕಾದ ಬೇರೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಇನ್ನೊಂದು ಹೊರಗುತ್ತಿಗೆ ಸಂಸ್ಥೆಯಲ್ಲೂ ಕಾರ್ಮಿಕರು ದುಡಿಯುತ್ತಿದ್ದು, ಕೊಂಗೂರುಮಠ, ಮಂಜಲ್‌ಪಾದೆ, ಪಚ್ಚನಾಡಿ, ಪಿಲಿಕುಳಗಳಲ್ಲಿ 40 ಕಾರ್ಮಿಕರು ಇದ್ದಾರೆ. ವಿದ್ಯುತ್, ಕುಡಿಯುವ ನೀರು ಸರಬರಾಜು ಕೊರತೆ, ರಜೆ ನೀಡಲು ಸತಾಯಿಸುವುದು, ಆರೋಗ್ಯ ತಪಾಸಣೆ ಮಾಡದೆ ಇರುವುದು ಇತ್ಯಾದಿ ಹಲವು ಸಮಸ್ಯೆಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ. 20-25 ವರ್ಷಗಳಿಂದ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಸಂಕಷ್ಟ ಪರಿಹಾರಕ್ಕೆ ಕೂಡಲೆ ಪಾಲಿಕೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ದುಡಿಯುತ್ತಿರುವ 64 ಪೌರ ಕಾರ್ಮಿಕರನ್ನು ಕಾಯಂ ಪೌರಕಾರ್ಮಿಕರೆಂದು ಆದೇಶಿಸಿ 2000ರಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಈವರೆಗೂ ಸರಕಾರ ಅನುಮೋದನೆ ನೀಡದೆ ಸತಾಯಿಸುತ್ತಿದೆ. ಇದರಿಂದಾಗಿ ಪೌರ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಜಗದೀಶ್ ಪಾಂಡೇಶ್ವರ ಹೇಳಿದರು.

64 ಕಾರ್ಮಿಕರಲ್ಲಿ 22 ಮಂದಿ ಕರ್ತವ್ಯದಲ್ಲಿದ್ದಾಗಲೇ ಮಾರಕ ಕಾಯಿಲೆಗಳಿಂದ ನಿಧನರಾಗಿದ್ದರೂ ಅನುಕಂಪದ ಆಧಾರದಲ್ಲಿ ಅವರ ಕುಟುಂಬಸ್ಥರಿಗೆ ಕೆಲಸ ನೀಡಿಲ್ಲ. ಉಳಿದ 42 ಮಂದಿಗೆ ಸರಕಾರಿ ಮಾಸಿಕ ವೇತನ, ಇತರ ಸೌಲಭ್ಯಗಳು ದೊರೆಯುತ್ತಿದ್ದರೂ ಸರಲಾರ ಅನುಮೋದನೆ ನೀಡದೆ ಇರುವುದರಿಂದ ನಿವೃತ್ತಿ ವೇತನ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಲ್ಲ 64 ಮಂದಿಯನ್ನು ಸರಕಾರ ಕೂಡಲೇ ಕಾಯಂ ಪೌರಕಾರ್ಮಿಕರೆಂದು ಅನುಮೋದನೆ ಹೊರಡಿಸಬೇಕು ಎಂದು ಜಗದೀಶ್ ಪಾಂಡೇಶ್ವರ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಪದ್ಮನಾಭ ವಾಮಂಜೂರು, ಸುಂದರ ಬಲ್ಲಾಳ್‌ಬಾಗ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News