ಅಂತರ್ ಜಾತಿ, ಅಂತರ್ ಧರ್ಮೀಯ ದಂಪತಿಗೆ ‘ಸುರಕ್ಷಿತ ಮನೆ’ ತೆರೆಯಲಿದೆ ಕೇರಳ ಸರಕಾರ

Update: 2020-03-05 16:41 GMT

ತಿರುವನಂತಪುರ, ಮಾ. 4: ಜಾತಿ ಹಾಗೂ ಧರ್ಮ ಮೀರಿ ವಿವಾಹವಾದ ದಂಪತಿ ದೇಶದ ಹಲವು ಭಾಗಗಳಲ್ಲಿ ಬಹಿಷ್ಕಾರಕ್ಕೆ ಹಾಗೂ ಬೆದರಿಕೆಗೆ ಒಳಗಾಗುತ್ತಿದ್ದಾರೆ. ಇಂಥವರಿಗೆ ಸುರಕ್ಷಿತ ವಾಸ್ತವ್ಯ ಕಲ್ಪಿಸಲು ಕೇರಳ ‘ಸುರಕ್ಷಿತ ಮನೆ’ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.

ಎಲ್ಲ ಜಿಲ್ಲೆಗಳಲ್ಲಿ ಇಂತಹ ಅನನ್ಯ ಸುರಕ್ಷಿತ ಯೋಜನೆಯನ್ನು ಸಾಮಾಜಿಕ ನ್ಯಾಯ ಇಲಾಖೆ ಪ್ರಕಟಿಸಿದೆ. ಇಂತಹ ದಂಪತಿಗೆ ವಿವಾಹದ ನಂತರ ಒಂದು ವರ್ಷಗಳ ಕಾಲ ವಾಸಿಸಲು ‘ಸುರಕ್ಷಿತ ಮನೆ’ ಸೌಲಭ್ಯ ಆರಂಭಿಸಲು ಪ್ರಾಥಮಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.

ದಂಪತಿಗೆ ಭದ್ರತೆ ನೀಡುವುದು ಇದರ ಉದ್ದೇಶ ಎಂದು ಸಚಿವೆ ವಿಧಾನ ಸಭೆಯಲ್ಲಿ ಹೇಳಿದರು. ಸ್ವಯಂಸೇವಾ ಸಂಸ್ಥೆಗಳ ಬೆಂಬಲದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಸಾಮಾನ್ಯ ವರ್ಗಕ್ಕೆ ಸೇರಿದ ಹಾಗೂ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರುವ ದಂಪತಿಗೆ ಸ್ವ ಉದ್ಯೋಗ ಮಾಡಲು 30 ಸಾವಿರ ರೂಪಾಯಿ ಹಣಕಾಸು ನೆರವನ್ನು ಇಲಾಖೆ ಈಗಾಗಲೇ ನೀಡುತ್ತಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭ ದಂಪತಿಯಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, 75,000 ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಈ ವರ್ಗದಲ್ಲಿ ಅಂತರ್ ಧರ್ಮೀಯ ದಂಪತಿ ಇದ್ದರೆ ಹಾಗೂ ಅವರು ಉದ್ಯೋಗದಲ್ಲಿ ಇದ್ದರೆ, ಸರಕಾರ ಇಲಾಖೆಗಳಲ್ಲಿ ವರ್ಗಾವಣೆ ಸಂದರ್ಭ ಅವರನ್ನು ವಿಶೇಷವಾಗಿ ಪರಿಗಣಿಸಲಾಗುತ್ತಿದೆ. ಆದರೆ, ಅವರಿಗೆ ಉದ್ಯೋಗ ಮೀಸಲಾತಿಯ ಯಾವುದೇ ಕಾನೂನು ಇಲ್ಲ ಎಂದು ಸಚಿವೆ ತಿಳಿಸಿದರು.

ಅಂತರ್ ಜಾತಿ ಹಾಗೂ ಅಂತರ್ ಧರ್ಮದ ವಿವಾಹದ ಸಂದರ್ಭ ಬಹಿಷ್ಕಾರ ಹಾಗೂ ದಾಳಿಯ ಘಟನೆಗಳು ಇತ್ತೀಚೆಗಿನ ದಿನಗಳಲ್ಲಿ ರಾಷ್ಟ್ರಾದ್ಯಂತ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಕೆ.ಕೆ. ಶೈಲಜಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News