ದೇಶ ಎದುರಿಸುತ್ತಿರುವ ಬಿಕ್ಕಟ್ಟು ಪರಿಹಾರಕ್ಕೆ ‘3 ಸೂತ್ರ’ ಮುಂದಿರಿಸಿದ ಮನಮೋಹನ್ ಸಿಂಗ್

Update: 2020-03-06 15:15 GMT

ಹೊಸದಿಲ್ಲಿ, ಮಾ.6: ದೇಶದಲ್ಲಿ ಈಗ ಉಲ್ಬಣಿಸಿರುವ ವಿವಿಧ ಬಿಕ್ಕಟ್ಟು ಪರಿಹಾರಕ್ಕೆ 3 ಸೂತ್ರಗಳನ್ನು ನರೇಂದ್ರ ಮೋದಿ ಸರಕಾರದ ಮುಂದೆ ಇಡಲು ಬಯಸುವುದಾಗಿ ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಹೇಳಿದ್ದಾರೆ. ದೇಶವು ಈಗ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ, ಆರ್ಥಿಕ ಕುಸಿತ ಮತ್ತು ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಸ್ ಸೋಂಕು ಈ ಮೂರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಇದರಲ್ಲಿ ಮೊದಲ ಎರಡು ಸಮಸ್ಯೆ ಸರಕಾರವೇ ಸೃಷ್ಟಿಸಿದ್ದು. ಮೂರನೆಯದು ದೇಶಕ್ಕೆ ಎದುರಾಗಿರುವ ಬಾಹ್ಯ ಆಘಾತವಾಗಿದೆ ಎಂದು ಸಿಂಗ್ ಹೇಳಿದ್ದಾರೆ.

1991ರಲ್ಲಿಯೂ ದೇಶ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಿತ್ತು. ಕೊಲ್ಲಿ ಯುದ್ಧದ ಪರಿಣಾಮ ತೈಲ ಬೆಲೆ ಗಗನಕ್ಕೇರಿದ್ದರಿಂದ ದೇಶದ ಅರ್ಥವ್ಯವಸ್ಥೆ ಕುಸಿದಿತ್ತು. ಆದರೆ ಆಗ ಆಡಳಿತದಲ್ಲಿದ್ದವರು ಸಮರ್ಥ ಸುಧಾರಣಾ ಕ್ರಮಗಳಿಂದ ಈ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಿ ಆರ್ಥಿಕತೆಗೆ ಪುನಶ್ಚೇತನ ನೀಡಿದ್ದರು. ಆದರೆ ಈಗ ದೇಶ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಿರಂತರ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಿಂದ ದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುವಂತಾಗಿದೆ. ಉದ್ಯಮ ವಲಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಹೂಡಿಕೆ, ಉತ್ಪಾದನೆ ಕಡಿಮೆಯಾದರೆ ಉದ್ಯೋಗ ಮತ್ತು ಆದಾಯವೂ ಕಡಿಮೆಯಾಗುತ್ತದೆ . ಸಮಾಜದಲ್ಲಿ ನೆಲೆಸಿರುವ ಅಶಾಂತಿಯ ಪರಿಸ್ಥಿತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬಂದಿರುವುದು ಆರ್ಥಿಕ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಕೊರೊನ ವೈರಸ್‌ನ ಸೋಂಕು ನಿಯಂತ್ರಣಕ್ಕೆ ಸರಕಾರ ವ್ಯಾಪಕ ಕ್ರಮ ಕೈಗೊಳ್ಳದಿದ್ದರೆ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಬಿಕ್ಕಟ್ಟು ತೀವ್ರಗೊಳ್ಳಬಹುದು ಎಂದು ಎಚ್ಚರಿಸಿರುವ ಅವರು, ಬಿಕ್ಕಟ್ಟು ಪರಿಹಾರಕ್ಕೆ 3 ಸಲಹೆಗಳನ್ನು ಮೋದಿ ಸರಕಾರಕ್ಕೆ ನೀಡಿದ್ದಾರೆ. ಕೊರೊನ ವೈರಸ್‌ನ ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಳ್ಳುವುದು ಇದರಲ್ಲಿ ಮೊದಲನೆಯದು. ಎರಡನೆಯದು- ಪೌರತ್ವ ಕಾಯ್ದೆಯನ್ನು ಹಿಂಪಡೆಯುವುದು ಅಥವಾ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು, ಮೂರನೆಯದು- ಬಳಕೆ ಬೇಡಿಕೆಗೆ ಉತ್ತೇಜನ ನೀಡುವ ವಿಸ್ತೃತ ಮತ್ತು ನಿಖರ ಯೋಜನೆ ರೂಪಿಸಿ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವುದು. ದೇಶದ ಜನರ ಮನದಲ್ಲಿ ಭೀತಿ ಮೂಡಿಸುವುದು ತನ್ನ ಉದ್ದೇಶವಲ್ಲ. ಆದರೆ ವಾಸ್ತವ ಪರಿಸ್ಥಿತಿಯ ಮಾಹಿತಿಯನ್ನು ನೀಡುವುದು ತನ್ನ ಕರ್ತವ್ಯವಾಗಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News