ದಿಲ್ಲಿಯಲ್ಲಿ ಮತ್ತೋರ್ವ ವ್ಯಕ್ತಿಗೆ ಕೊರೋನಾ ವೈರಾಣು ಸೋಂಕು ದೃಢ
ಹೊಸದಿಲ್ಲಿ, ಮಾ. 6: ಇತ್ತೀಚೆಗೆ ಥಾಯ್ ಲ್ಯಾಂಡ್ ಹಾಗೂ ಮಲೇಶ್ಯಾಕ್ಕೆ ಭೇಟಿ ನೀಡಿದ ಪಶ್ಚಿಮ ದಿಲ್ಲಿಯ ವ್ಯಕ್ತಿಯೋರ್ವರಿಗೆ ಕೊರೋನಾ ವೈರಾಣು ಸೋಂಕು ಆಗಿರುವುದು ದೃಢಪಟ್ಟಿದೆ. ಇದರೊಂದಿಗೆ ಭಾರತದಲ್ಲಿ ಕೊರೋನಾ ವೈರಾಣು ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಪಶ್ಚಿಮ ದಿಲ್ಲಿಯ ಉತ್ತಮ್ ನಗರದ ನಿವಾಸಿಯಾಗಿರುವ ಈ ವ್ಯಕ್ತಿ ಥಾಲ್ಯಾಂಡ್ ಹಾಗೂ ಮಲೇಶ್ಯಾಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಇಲ್ಲಿಗೆ ಆಗಮಿಸಿದ ಸಂದರ್ಭ ರಕ್ತ ತಪಾಸಣೆ ವೇಳೆ ಕೊರೋನಾ ವೈರಾಣು ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆರೋಗ್ಯ) ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಇರಾನ್‌ಗೆ ಭೇಟಿ ನೀಡಿದ್ದ ಗಾಝಿಯಾಬಾದ್ ವ್ಯಕ್ತಿಯೋರ್ವನಿಗೆ ಕೊರೋನಾ ವೈರಾಣು ಸೋಂಕು ಇರುವುದು ಗುರುವಾರ ದೃಢಪಟ್ಟಿತ್ತು. ಇದರೊಂದಿಗೆ ಈಗ ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಕೊರೋನಾ ವೈರಾಣು ಸೋಂಕಿತರ ಒಟ್ಟು ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಎರಡು ದಿಲ್ಲಿ, ತಲಾ ಒಂದು ಗಾಝಿಯಾಬಾದ್ ಹಾಗೂ ಗುರ್ಗಾಂವ್. ಬುಧವಾರದ ವರೆಗೆ 13 ಇಟಲಿಯ ಪ್ರವಾಸಿಗರ ಸಹಿತ ಕೊರೋನಾ ವೈರಾಣು ಸೋಂಕಿಗೆ ಒಳಗಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿತ್ತು. ಈ ಪಟ್ಟಿ ಕಳೆದ ತಿಂಗಳು ಕೇರಳದಲ್ಲಿ ವರದಿಯಾದ ಮೊದಲ 3 ಪ್ರಕರಣಗಳನ್ನು ಕೂಡ ಒಳಗೊಂಡಿತ್ತು.