ಸಾರ್ವಜನಿಕ ಅಭಿಪ್ರಾಯ ಬೆಂಬಲಿಸುವ ಎನ್‌ಜಿಒಗಳನ್ನು ದಂಡಿಸಬಾರದು: ಸುಪ್ರೀಂ ಸೂಚನೆ

Update: 2020-03-06 15:52 GMT

ಹೊಸದಿಲ್ಲಿ, ಮಾ.6: ಜನತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಕಾನೂನುಬದ್ಧ ವಿಧಾನಗಳಾದ ಪ್ರತಿಭಟನೆ ಅಥವಾ ಮುಷ್ಕರವನ್ನು ಬೆಂಬಲಿಸುವ ಸರಕಾರೇತರ ಸಂಘಟನೆಗಳು ವಿದೇಶಿ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸುವ ಮೂಲಕ ದಂಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸರಕಾರಕ್ಕೆ ಸೂಚಿಸಿದೆ.

ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲದ ಎನ್‌ಜಿಒ(ಸರಕಾರೇತರ ಸಂಘಟನೆಗಳು)ಗಳು ಸಾರ್ವಜನಿಕರ ಅಭಿಪ್ರಾಯವನ್ನು ಬೆಂಬಲಿಸಿದರೆ ಅವುಗಳನ್ನು ರಾಜಕೀಯ ಸ್ವರೂಪದ ಸಂಘಟನೆ ಎಂದು ಘೋಷಿಸಿ ಅವುಗಳ ವಿರುದ್ಧ ದಂಡನಾರ್ಹ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ಮತ್ತು ದೀಪಕ್ ಗುಪ್ತಾ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಸೂಚಿಸಿದೆ.

ಬಂದ್, ಮುಷ್ಕರ, ರಸ್ತೆ ತಡೆ ಇತ್ಯಾದಿಗಳು ರಾಜಕೀಯ ಕ್ರಮಗಳ ಕುರಿತ ಸಾಮಾನ್ಯ ಅಭಿವ್ಯಕ್ತಿಯಾಗಿದೆ ಎಂದು ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ 2010ರಲ್ಲಿ ತಿಳಿಸಲಾಗಿದೆ. ಆದ್ದರಿಂದ , ತಮ್ಮ ಹಕ್ಕನ್ನು ಪಡೆಯಲು ಅಥವಾ ಉಳಿಸಿಕೊಳ್ಳಲು ಪ್ರತಿಭಟನೆ ನಡೆಸುವ ಜನರಿಗೆ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಬೆಂಬಲ ಸೂಚಿಸುವ ಎನ್‌ಜಿಒಗಳು ವಿದೇಶಿ ದೇಣಿಗೆ ಸಂಗ್ರಹಕ್ಕೆ ನಿಷೇಧ ವಿಧಿಸುವ ಶಿಕ್ಷೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

 ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆಯ ಕೆಲವು ಅಂಶಗಳು ಸಂವಿಧಾನ ದತ್ತವಾದ ಕೆಲವು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಇಂಡಿಯನ್ ಸೋಷಿಯಲ್ ಆ್ಯಕ್ಷನ್ ಫೋರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News