ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ: ಸಂಸದೀಯ ಸಮಿತಿ ಪ್ರಸ್ತಾವ
ಹೊಸದಿಲ್ಲಿ,ಮಾ.6: ನಕಲಿ ಮತದಾರರ ಹೆಸರುಗಳನ್ನು ತೊಡೆದುಹಾಕಲು ಮತದಾರರ ಪಟ್ಟಿಯೊಂದಿಗೆ ಮತದಾರರ ಆಧಾರ್ ಸಂಖ್ಯೆಗಳನ್ನು ಜೋಡಣೆಗೊಳಿಸುವ ಚುನಾವಣಾ ಆಯೋಗದ ಪ್ರಸ್ತಾವವನ್ನು ಇಲಾಖಾ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯು ಶುಕ್ರವಾರ ಬೆಂಬಲಿಸಿದೆ.
ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿದೆ ಎಂದಿರುವ ಸಮಿತಿಯು,ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ.
ಚುನಾವಣಾ ಆಯೋಗಕ್ಕೆ ನೋಡಲ್ ಸಚಿವಾಲಯವಾಗಿರುವ ಕಾನೂನು ಮತ್ತು ನ್ಯಾಯ ಸಚಿವಾಲಯದ ಅನುದಾನ ಬೇಡಿಕೆಗಳು (2020-21) ಕುರಿತು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಸಮಿತಿಯು ಈ ಶಿಫಾರಸನ್ನು ಮಾಡಿದೆ.
ಚುನಾವಣಾ ಆಯೋಗವು ಹೊಸದಾಗಿ ಮತದಾರರಾಗಿ ಅರ್ಜಿ ಸಲ್ಲಿಸುವವರ ಮತ್ತು ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರುಗಳಿರುವವರ ಆಧಾರ್ ಸಂಖ್ಯೆಗಳನ್ನು ಪಡೆಯಲು ಅವಕಾಶ ಕಲ್ಪಿಸಲು ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಗಳನ್ನು ತರಬೇಕೆಂದು ಕಳೆದ ವರ್ಷದ ಆಗಸ್ಟ್‌ನಲ್ಲಿ ಸರಕಾರಕ್ಕೆ ಸಲ್ಲಿಸಲಾದ ಆಯೋಗದ ಪ್ರಸ್ತಾವದಲ್ಲಿ ಹೇಳಲಾಗಿತ್ತು.
ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳನ್ನು ತಡೆಯಲು ಆಧಾರ್ ಸಂಖ್ಯೆಗಳನ್ನು ಮತದಾರರ ಚುನಾವಣಾ ದತ್ತಾಂಶದೊಂದಿಗೆ ಜೋಡಿಸುವ ಆಯೋಗದ ಕ್ರಮವನ್ನು ಆ.2015ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ಥಗಿತಗೊಳಿಸಿತ್ತು. ಮತದಾರರ ಪಟ್ಟಿಯಲ್ಲಿ ನಕಲಿ ಸೇರ್ಪಡೆಗಳನ್ನು ತಡೆಯಲು ತನ್ನ ರಾಷ್ಟ್ರೀಯ ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮದ ಅಂಗವಾಗಿ ಆಗ ಆಯೋಗವು ಮತದಾರರ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿತ್ತು.