ರಾಜಕೀಯ ರ‍್ಯಾಲಿಯಲ್ಲಿ ಗುಂಡಿನ ದಾಳಿ : 32 ಮಂದಿ ಮೃತ್ಯು

Update: 2020-03-07 04:38 GMT

ಕಾಬೂಲ್: ರಾಜಕೀಯ ರ‍್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ. ಅಪ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ವಾಪಾಸು ಪಡಯುವ ಸಂಬಂಧ ತಾಲಿಬಾನ್ ಜತೆ ಒಪ್ಪಂದ ಮಾಡಿಕೊಂಡ ನಂತರ ನಡೆದ ಭೀಕರ ದಾಳಿ ಇದಾಗಿದೆ.

"ಮೆಷಿನ್‌ಗನ್ ಹಾಗೂ ಗ್ರೆನೇಡ್ ಮೂಲಕ ಐಎಸ್‌ನ ಇಬ್ಬರು ಸಹೋದರರು ಸಮಾವೇಶವನ್ನು ಗುರಿ ಮಾಡಿ ದಾಳಿ ಮಾಡಿದ್ದಾರೆ" ಎಂದು ಇಸ್ಲಾಮಿಕ್ ಸ್ಟೇಟ್ ಪ್ರಕಟಿಸಿದೆ. ಪಶ್ಚಿಮ ಕಾಬೂಲ್‌ನಲ್ಲಿ ನಡೆದ ಬೃಹತ್ ರ್ಯಾಲಿಯ ವೇಳೆ ನಡೆದ ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟು, 58ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ವಹೀದುಲ್ಲಾ ಮಯರ್ ಹೇಳಿದ್ದಾರೆ.

ಆಂತರಿಕ ರಕ್ಷಣಾ ಸಚಿವಾಲಯದ ವಕ್ತಾರರಾದ ನಸ್ರತ್ ರಹೀಮಿ ಹೇಳಿಕೆ ನೀಡಿ ಮೃತಪಟ್ಟವರ ಸಂಖ್ಯೆ 29 ಎಂದು ಹೇಳಿದ್ದಾರೆ. 61 ಮಂದಿ ಗಾಯಗೊಂಡಿದ್ದಾಗಿ ಅವರು ವಿವರಿಸಿದ್ದಾರೆ. ವಿಶೇಷ ಪಡೆಗಳು ಬಳಿಕ ಇಬ್ಬರೂ ದಾಳಿಕೋರರನ್ನು ಹತ್ಯೆ ಮಾಡಿದ್ದಾರೆ.

ಹಝಾರಾ ಬುಡಕಟ್ಟು ಸಮೂಹಕ್ಕೆ ಸೇರಿದ ಅಬುಲ್ ಅಲಿ ಮಝಾರಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಈ ದಾಳಿ ನಡೆದಿದ್ದು, ಸೇರಿದ್ದ ಬಹುತೇಕ ಮಂದಿ ಶಿಯಾ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಕಳೆದ ವರ್ಷ ಇದೇ ಸಮಾವೇಶದಲ್ಲಿ ಉಗ್ರರು ದಾಳಿ ನಡೆಸಿ 11 ಮಂದಿಯನ್ನು ಹತ್ಯೆ ಮಾಡಿದ್ದರು. ಅಪ್ಘಾನಿಸ್ತಾನದ ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ಲಾ ಸೇರಿದಂತೆ ಹಲವು ಮಂದಿ ಉನ್ನತ ಅಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News