×
Ad

ಜಮ್ಮು ಕಾಶ್ಮೀರದಲ್ಲಿ ಕೊರೋನಾ ವೈರಸ್ ನ ಮತ್ತೊಂದು ಪ್ರಕರಣ ದೃಢ

Update: 2020-03-07 19:49 IST

ಜಮ್ಮುಕಾಶ್ಮೀರ, ಮಾ. 7: ಜಮ್ಮು ಹಾಗೂ ಕಾಶ್ಮೀರದಲ್ಲಿ ಓರ್ವನಿಗೆ ಕೊರೋನಾ ವೈರಾಣು ಸೋಂಕು ಆಗಿರುವುದು ಶನಿವಾರ ದೃಢಪಟ್ಟಿದೆ. ಇದರೊಂದಿಗೆ ಭಾರತದಲ್ಲಿ ಕೊರೋನಾ ವೈರಾಣು ಸೋಂಕಿನ ದೃಢೀಕೃತ ಪ್ರಕರಣಗಳು 32ಕ್ಕೆ ಏರಿದೆ.

ಅವರಿಗೆ ಜಮ್ಮುವಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಇನ್ನಿಬ್ಬರು ಕೊರೋನಾ ವೈರಾಣು ಸೋಂಕಿಗೆ ಒಳಗಾಗಿರುವ ಶಂಕೆ ಉಂಟಾಗಿದೆ. ಈ ಇಬ್ಬರು ವ್ಯಕ್ತಿಗಳು ಇಟಲಿ ಹಾಗೂ ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸಿದ್ದರು. ಈಗ ಅವರಿಬ್ಬರನ್ನು ಜಮ್ಮುವಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿರುವ ದಿಗ್ಬಂದನ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಈ ನಡುವೆ ಇಟಲಿಯಿಂದ ಪಂಜಾಬ್‌ನ ಹೊಸಿಯಾರ್‌ಪುರಕ್ಕೆ ಆಗಮಿಸಿರುವ ಮೂವರ ರಕ್ತದ ಮಾದರಿಯನ್ನು ಹೊಸದಿಲ್ಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಅದರ ಪ್ರಾಥಮಿಕ ವರದಿಯಲ್ಲಿ ಇಬ್ಬರಿಗೆ ಕೊರೋನಾ ವೈರಸ್ ಸೋಂಕು ಆಗಿರುವುದು ಪತ್ತೆಯಾಗಿದೆ. ಅವರಿಬ್ಬರನ್ನು ಅಮೃತಸರದ ಜಿಎಂಸಿಎಚ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪುಣೆಯ ಎನ್‌ಐವಿಯ ಅಂತಿಮ ವರದಿಗಾಗಿ ಕಾಯಲಾಗುತ್ತಿದೆ.

52 ಪ್ರಯೋಗಾಲಯಗಳು

ಕೊರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಕ್ತ ಮಾದರಿ ಪರೀಕ್ಷೆ ನಡೆಸಲು 52 ಪ್ರಯೋಗಾಲಯಗಳು ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಲು 57 ಪ್ರಯೋಗಾಲಯಗಳನ್ನು ಆರಂಭಿಸಲಾಗಿದೆ. ರೋಗ ಸಂತ್ರಸ್ತ ದೇಶಗಳಿಗೆ ಪ್ರಯಾಣಿಸಿರುವ ಹಾಗೂ ರೋಗ ಲಕ್ಷಣ ಕಂಡು ಬಂದ ಶಂಕಿತರ ರಕ್ತದ ಮಾದರಿಗಳ ತಪಾಸಣೆ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಸಂಶೋಧನೆ ಹಾಗೂ ಐಸಿಎಂಆರ್ 52 ಪ್ರಯೋಗಾಲಯಗಳನ್ನು ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 6ರ ವರೆಗೆ 3,404 ವ್ಯಕ್ತಿಗಳಿಂದ ಒಟ್ಟು 4,058 ರಕ್ತದ ಮಾದರಿಗಳ ತಪಾಸಣೆ ನಡೆಸಲಾಗಿದೆ. ಇದು ವುಹಾನ್, ಚೀನಾದಿಂದ ಸ್ಥಳಾಂತರಿಸಲಾದ ಐಟಿಬಿಬಿ ಹಾಗೂ ಮಾನೇಸರ್ ಶಿಬಿರದಲ್ಲಿ ದಿಗ್ಬಂಧನದಲ್ಲಿ ಇರಿಸಲಾದ, ಮೊದಲ ದಿನದಿಂದ ಹಿಡಿದು 14 ದಿನಗಳ ವರೆಗೆ ಎರಡು ಬಾರಿ 654 ವ್ಯಕ್ತಿಗಳ 1,058 ರಕ್ತ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿರುವುದು ಕೂಡ ಸೇರಿದೆ. ಇದಲ್ಲದೆ, ಜಪಾನ್‌ನ ವುಹಾನ್ ಹಾಗೂ ಡೈಮಂಡ್ ಪ್ರಿನ್ಸಸ್ ಶಿಪ್‌ನಿಂದ ಫೆಬ್ರವರಿ 26ರಂದು ತೆರವುಗೊಳಿಸಲಾದ 236 ವ್ಯಕ್ತಿಗಳನ್ನು ಮೊದಲ ದಿನದಿಂದ 14 ದಿನಗಳ ವರೆಗೆ ರಕ್ತ ತಪಾಸಣೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಮಾರ್ಚ್ 31ರ ವರೆಗೆ ಪ್ರಾಥಮಿಕ ಶಾಲೆಗೆ ರಜೆ ಘೋಷಣೆ

ಕೊರೋನಾ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಜಿಲ್ಲಾ ದಂಡಾಧಿಕಾರಿ ಸುಷ್ಮಾ ಚೌಹಾಣ್ ಅವರು ಸರಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 31ರ ವರೆಗೆ ರಜೆ ಘೋಷಿಸಿದ್ದಾರೆ. ಸಾಮೂಹಿಕ ಸೇರದಿರುವುದೇ ಮೊದಲಾದ ನಿಗದಿತ ತಡೆಗಟ್ಟುವ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಅನುಸರಿಸದೇ ಇದ್ದಲ್ಲಿ, ಕೊರೋನಾ ವೈರಸ್ ಸೋಂಕು ತ್ವರಿತವಾಗಿ ಹರಡುತ್ತದೆ. ಆದುದರಿಂದ ಸಾಮೂಹಿಕವಾಗಿ ಸೇರುವುದನ್ನು ತಡೆಯಲು ಮುಖ್ಯವಾಗಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬಾರದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News