ಸಿಬಿಐ ಮಾಜಿ ವಿಶೇಷ ನಿರ್ದೇಶಕ ಅಸ್ತಾನಾಗೆ ಕ್ಲೀನ್ ಚಿಟ್‌ ಗೆ ನ್ಯಾಯಾಲಯ ಅಸ್ತು

Update: 2020-03-07 14:21 GMT
ಫೈಲ್ ಚಿತ್ರ

ಹೊಸದಿಲ್ಲಿ,ಮಾ.7: ತನ್ನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತ್ತು ಡಿಎಸ್‌ಪಿ ದೇವೇಂದ್ರ ಕುಮಾರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದಕ್ಕೆ ಶನಿವಾರ ಅಸ್ತು ಎಂದಿರುವ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯವು ಮನೋಜ್ ಪ್ರಸಾದ್ ವಿರುದ್ಧದ ಸಿಬಿಐ ಆರೋಪಪಟ್ಟಿಯನ್ನು ತನ್ನ ಗಮನಕ್ಕೆ ತೆಗೆದುಕೊಂಡಿದೆ.

 ಸರಕಾರಿ ನೌಕರರಾದ ಅಸ್ತಾನಾ ಮತ್ತು ಕುಮಾರ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್ ಅಗರವಾಲ್ ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ. ಆಗಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರ ಸೂಚನೆಯಂತೆ ತನ್ನ ವಿರುದ್ಧ ಕಪೋಲಕಲ್ಪಿತ ಎಫ್‌ಐಆರ್‌ನ್ನು ದಾಖಲಿಸಲಾಗಿದೆ ಎಂದು ಮೊದಲ ದಿನದಿಂದಲೇ ಹೇಳುತ್ತ ಬಂದಿದ್ದ ಅಸ್ತಾನಾಗೆ ನ್ಯಾಯಾಲಯದ ಈ ಆದೇಶವು ಭಾರೀ ನೆಮ್ಮದಿಯನ್ನು ನೀಡಿದೆ.

 ಸೋದರರಾದ ಮನೋಜ್ ಪ್ರಸಾದ್ ಮತ್ತು ಸೋಮೇಶ್ ಪ್ರಸಾದ್ ಅವರ ವಿರುದ್ಧದ ವಂಚನೆ,ಕ್ರಿಮಿನಲ್ ಒಳಸಂಚು ಇತ್ಯಾದಿ ಆರೋಪಗಳನ್ನು ನ್ಯಾಯಾಲಯವು ತನ್ನ ಗಮನಕ್ಕೆ ತೆಗೆದುಕೊಂಡಿದೆ. ಸೋಮೇಶ್ ಪ್ರಸಾದನನ್ನು ಆರೋಪಪಟ್ಟಿಯಲ್ಲಿ ಹೆಸರಿಸಿರಲಿಲ್ಲವಾದರೂ ಈಗ ಆರೋಪಿಯನ್ನಾಗಿ ಆತನಿಗೂ ಸಮನ್ಸ್ ಹೊರಡಿಸಲಾ ಗಿದೆ. ಆದರೆ ಮನೋಜ್ ಪ್ರಸಾದ್ ನನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿತ್ತು.

2018,ಅ.15ರಂದು ಅಸ್ತಾನಾ ವಿರುದ್ಧ ಕ್ರಿಮಿನಲ್ ಒಳಸಂಚು,ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರ್ವರ್ತನೆ ಆರೋಪಗಳಲ್ಲಿ ಪ್ರಕರಣ ದಾಖಲಾಗಿತ್ತು. ಮರುದಿನ ದಿಲ್ಲಿಯಲ್ಲಿದ್ದ ದುಬೈ ನಿವಾಸಿ ಮನೋಜ ಪ್ರಸಾದನನ್ನು ಬಂಧಿಸಲಾಗಿದ್ದರೆ,ಸುಮಾರು ಒಂದು ವಾರದ ಬಳಿಕ ಕುಮಾರ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿತ್ತು.

2020,ಫೆ.11ರಂದು ಅಸ್ತಾನಾ ಮತ್ತು ಕುಮಾರ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ,ಮನೋಜ ಪ್ರಸಾದ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿತ್ತು.

 ಹಾಲಿ ಮಾದಕ ದ್ರವ್ಯ ನಿಯಂತ್ರಣ ಘಟಕ ಹಾಗೂ ನಾಗರಿಕ ವಾಯುಯಾನ ಭದ್ರತಾ ಘಟಕಗಳ ಮುಖ್ಯಸ್ಥರಾಗಿರುವ ಅಸ್ತಾನಾ,ಸಿಬಿಐ ನಿರ್ದೇಶಕ ಅಲೋಕ ವರ್ಮಾರ ಭ್ರಷ್ಟಾಚಾರ ಚಟುವಟಿಕೆಗಳನ್ನು ತಾನು ಸಂಪುಟ ಕಾರ್ಯದರ್ಶಿಯ ಎದುರು ಬಯಲಿಗೆಳೆದ ಬಳಿಕ ವರ್ಮಾರ ಸೂಚನೆಯ ಮೇರೆಗೆ ತನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪ್ರತಿಪಾದಿಸಿಕೊಂಡು ಬಂದಿದ್ದರು.

ವರ್ಮಾ ಹೈದರಾಬಾದ್‌ನ ಉದ್ಯಮಿ ಸತೀಶ ಬಾಬು ಸನಾ ಎಂಬಾತನಿಂದ ಎರಡು ಕೋ.ರೂ.ಲಂಚ ಪಡೆದಿರುವುದಾಗಿ ಅಸ್ತಾನಾ ಕೇಂದ್ರ ಜಾಗ್ರತ ಆಯೋಗ ಮತ್ತು ಸರಕಾರಕ್ಕೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News