ಪುಲ್ವಾಮ ದಾಳಿಗೆ ಅಮೆಝಾನ್‌ನಲ್ಲಿ ರಾಸಾಯನಿಕ ಖರೀದಿ: ವಿಚಾರಣೆ ವೇಳೆ ಬಹಿರಂಗ

Update: 2020-03-07 14:25 GMT

ಶ್ರೀನಗರ, ಮಾ. 7: ಕಳೆದ ವರ್ಷ ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನ ಸರಣಿಯ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಬೇಕಾಗಿದ್ದ ರಾಸಾಯನಿಕಗಳನ್ನು ಆನ್‌ಲೈನ್‌ನಲ್ಲಿ ಖರೀಸಿದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಎನ್‌ಐಎ ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ವೈಝ್ ಉಲ್ ಇಸ್ಲಾಂ (19) ಹಾಗೂ ಮುಹಮ್ಮದ್ ಅಬ್ಬಾಸ್ ರಾಥರ್ (32)ನನ್ನು ಪುಲ್ವಾಮದಿಂದ ಎನ್‌ಐಎ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಲ್ಲಿ ಬಂಧಿತರಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಪಾಕಿಸ್ತಾನದ ಜೈಶೆ ಮುಹಮ್ಮದ್ ಭಯೋತ್ಪಾದಕರ ನಿರ್ದೇಶನದಂತೆ ಸುಧಾರಿತ ಸ್ಫೋಟಕ ತಯಾರಿಸಲು ಬ್ಯಾಟರಿ ಹಾಗೂ ಇತರ ವಸ್ತುಗಳನ್ನು ಖರೀದಿಸಲು ಅಮೆಝಾನ್ ಶಾಪಿಂಗ್ ಖಾತೆಯನ್ನು ಬಳಸಿರುವುದಾಗಿ ವಿಚಾರಣೆ ವೇಳೆ ಇಸ್ಲಾಂ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆಸುವ ಪಿತೂರಿಯ ಒಂದು ಭಾಗವಾಗಿ ಆನ್‌ಲೈನ್‌ಲ್ಲಿ ಖರೀದಿಸಿದ್ದ ವಸ್ತುಗಳನ್ನು ತಾನು ವೈಯುಕ್ತಿಕವಾಗಿ ಜೈಶೆ ಮುಹಮ್ಮದ್ ಭಯೋತ್ಪಾದಕರಿಗೆ ಹಸ್ತಾಂತರಿಸಿದ್ದೇನೆ ಎಂದು ಆತ ತಿಳಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ರಾಥರ್ ಜೈಶೆ ಮುಹಮ್ಮದ್‌ನ ಸಂಘಟನೆಯ ಹಳೆಯ ಬಾಹ್ಯಾ ಜಗತ್ತಿನ ಕಾರ್ಯಕರ್ತ. ಜೈಶೆ ಮುಹಮ್ಮದ್‌ನ ಭಯೋತ್ಪಾದಕ ಹಾಗೂ ಐಇಡಿ ತಜ್ಞ ಮುಹಮ್ಮದ್ ಉಮ್ಮರ್ 2018 ಎಪ್ರಿಲ್ ಹಾಗೂ ಮೇಯಲ್ಲಿ ಕಾಶ್ಮೀರಕ್ಕೆ ಆಗಮಿಸಿದ ಬಳಿಕ ತನ್ನ ಮನೆಯಲ್ಲಿ ಆಶ್ರಯ ನೀಡಿರುವುದಾಗಿ ರಾಥರ್ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿಯ ಮುನ್ನ ಜೈಶೆ ಮುಹಮ್ಮದ್‌ನ ಇತರ ಭಯೋತ್ಪಾದಕರಾದ ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್, ಸಮೀರ್ ಅಹ್ಮದ್ ದಾರ್ ಹಾಗೂ ಕಮ್ರಾನ್‌ಗೂ ರಾಥರ್ ಆಶ್ರಯ ನೀಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News