ವಿಶ್ವದ ಪ್ರತಿಯೊಬ್ಬರನ್ನೂ ಸ್ವಾಗತಿಸುವ ಇನ್ನೊಂದು ದೇಶವನ್ನು ನನಗೆ ತೋರಿಸಿ: ಸಿಎಎ ಕುರಿತು ಜೈಶಂಕರ್

Update: 2020-03-07 17:23 GMT

ಹೊಸದಿಲ್ಲಿ,ಮಾ.7: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತು ಭಾರತವನ್ನು ಟೀಕಿಸುತ್ತಿರುವವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ವಿಶ್ವದ ಬೇರೆ ಯಾವುದೇ ದೇಶವು ಪ್ರತಿಯೊಬ್ಬರನ್ನೂ ಸ್ವಾಗತಿಸುವುದಿಲ್ಲ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿನ ಸ್ಥಿತಿ ಕುರಿತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯ ಟೀಕೆಗಾಗಿ ಅದನ್ನು ಕುಟುಕಿದ ಜೈಶಂಕರ್, ಅದರ ನಿರ್ದೇಶಕರು ಈ ಮೊದಲೂ ತಪ್ಪು ಹೇಳಿಕೆಯನ್ನು ನೀಡಿದ್ದರು ಮತ್ತು ಕಾಶ್ಮೀರ ವಿಷಯವನ್ನು ನಿರ್ವಹಿಸುವಲ್ಲಿ ಮಂಡಳಿಯ ಈ ಹಿಂದಿನ ದಾಖಲೆಯನ್ನು ನೋಡಬೇಕಾಗಿದೆ ಎಂದರು.

ಇಕನಾಮಿಕ್ ಟೈಮ್ಸ್ ಜಾಗತಿಕ ಉದ್ಯಮ ಶೃಂಗದಲ್ಲಿ ಸಿಎಎ ಕುರಿತು ಪ್ರಶ್ನೆಗೆ,‘ಈ ಕಾನೂನಿನ ಮೂಲಕ ದೇಶರಹಿತ ಜನರ ಸಂಖ್ಯೆಯನ್ನು ತಗ್ಗಿಸಲು ನಾವು ಪ್ರಯತ್ನಿಸಿದ್ದೇವೆ. ಇದನ್ನು ಮೆಚ್ಚಿಕೊಳ್ಳಬೇಕು’ ಎಂದು ಉತ್ತರಿಸಿದ ಅವರು, ‘ನಮಗೆ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗದ ರೀತಿಯಲ್ಲಿ ನಾವು ಈ ಕಾನೂನನ್ನು ಮಾಡಿದ್ದೇವೆ’ ಎಂದರು.

‘ವಿಶ್ವದಲ್ಲಿಯ ಪ್ರತಿಯೊಬ್ಬರನ್ನೂ ಸ್ವಾಗತಿಸುವ ಇನ್ನೊಂದು ದೇಶವನ್ನು ನನಗೆ ತೋರಿಸಿ. ಯಾರೂ ಅದನ್ನು ಮಾಡುವುದಿಲ್ಲ. ಅಮೆರಿಕ,ಯುರೋಪ್ ಕಡೆಗೆ ನೋಡಿ. ನಾನು ಪ್ರತಿಯೊಂದೂ ಐರೋಪ್ಯ ದೇಶದ ಉದಾಹರಣೆಯನ್ನು ನೀಡಬಲ್ಲೆ. ಏನಾದರೂ ಸಾಮಾಜಿಕ ಮಾನದಂಡವಿರುತ್ತದೆ’ ಎಂದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ ಹೊರಗೆ ಹೋಗುವುದು ಭಾರತದ ಉದ್ಯಮ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂದೂ ಜೈಶಂಕರ ಈ ಸಂದರ್ಭದಲ್ಲಿ ತಿಳಿಸಿದರು.

ಭಾರತವು ತನ್ನ ಮಿತ್ರರನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜಕ್ಕೂ ನಮ್ಮ ಮಿತ್ರರು ಯಾರು ಎನ್ನುವುದನ್ನು ತಿಳಿಯುವ ಅವಕಾಶ ನಮಗೆ ದೊರೆಯುತ್ತಿರಬಹುದು” ಎಂದರು. ಯುಎನ್‌ಎಚ್‌ಆರ್‌ಸಿ ನಿರ್ದೇಶಕರು ಕಾಶ್ಮೀರ ವಿಷಯದಲ್ಲಿ ಭಾರತದೊಂದಿಗೆ ಸಹಮತಿ ಹೊಂದಿಲ್ಲವಲ್ಲ ಎಂಬ ಪ್ರಶ್ನೆಗೆ ಜೈಶಂಕರ,ಅವರು ಹಿಂದೆಯೂ ತಪ್ಪು ನಿಲುವು ಹೊಂದಿದ್ದರು. ನೆರೆಯ ದೇಶಕ್ಕೆ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ತುಂಬ ಎಚ್ಚರಿಕೆಯಿಂದ ಅವರು (ಯುಎನ್‌ಎಚ್‌ಆರ್‌ಸಿ) ಗಡಿಯಾಚೆಯ ಭಯೋತ್ಪಾದನೆ ಸಮಸ್ಯೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅವರು ಎಲ್ಲಿಂದ ಬಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಿ,ಅವರು ಕಾಶ್ಮೀರ ವಿಷಯವನ್ನು ಹೇಗೆ ನಿರ್ವಹಿಸಿದ್ದರು ಎನ್ನುವುದಕ್ಕೆ ಯುಎನ್‌ಎಚ್‌ಆರ್‌ಸಿಯ ಹಿಂದಿನ ದಾಖಲೆಗಳನ್ನು ನೋಡಿ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News