ವೈದರೆಂದರೆ ಭಯ ಪಡುವ ಲ್ಯಾಟ್ರೊಫೋಬಿಯಾ

Update: 2020-03-08 13:47 GMT

ನೀವು ವೈದ್ಯರಿಗೆ ಹೆದರುತ್ತೀರಾ? ಕೆಲವರು ತೀವ್ರ ಅನಾರೋಗ್ಯದಿಂದ ನರಳುತ್ತಿದ್ದರೂ ವೈದ್ಯರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಅಜ್ಞಾನ ಅಥವಾ ಮೊಂಡುತನ ಇದಕ್ಕೆ ಕಾರಣವಾಗಿಬಹುದು. ಕೆಲವೊಮ್ಮೆ ಅವರು ವೈದ್ಯರೆಂದರೆ ಹೆದರಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಈ ಸ್ಥಿತಿಯನ್ನು ‘ಲ್ಯಾಟ್ರೊಫೋಬಿಯಾ’ ಎಂದು ಕರೆಯಲಾಗುತ್ತದೆ.

ಏನಿದು ಲ್ಯಾಟ್ರೊಫೋಬಿಯಾ?

ಇದು ವೈದ್ಯರು ಅಥವಾ ವೈದ್ಯಕೀಯ ಪರೀಕ್ಷೆಗಳ ಕುರಿತು ವ್ಯಕ್ತಿಯನ್ನು ಆವರಿಸಿಕೊಂಡಿರುವ ತರ್ಕಹೀನ ಭೀತಿಯಾಗಿದೆ. ಕೆಲವೊಮ್ಮೆ ವೈದ್ಯರ ಬಳಿ ತೆರಳುವ ವಿಚಾರವು ಆತಂಕವನ್ನುಂಟು ಮಾಡುವುದು ಸಾಮಾನ್ಯವಾಗಿದೆ. ಆದರೆ ವೈದ್ಯರ ಭಯವು ವ್ಯಕ್ತಿಯು ವೈದ್ಯರ ಸಮ್ಮುಖವಿದ್ದಾಗ ಆತನ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಲ್ಯಾಟ್ರೊಫೋಬಿಯಾದ ಲಕ್ಷಣಗಳು

ವೈದ್ಯರು ಅಥವಾ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ನಿಮ್ಮನ್ನು ಭೀತಿಯು ಕಾಡುತ್ತಿದ್ದರೆ ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ವಾಕರಿಕೆ ಮತ್ತು ಬಾಯಿ ಒಣಗುವುದು,ಅತಿಯಾದ ಬೆವರುವಿಕೆ ಮತ್ತು ನಡುಕ,ಆಸ್ಪತ್ರೆಗೆ ಹೋಗುವ ಬಗ್ಗೆ ಗೀಳಿನಂತೆ ಕಾಡುವ ಚಿಂತೆ,ಎದೆಬಡಿತ ಹೆಚ್ಚಾಗುವುದು ಮತ್ತು ರಕ್ತದೊತ್ತಡದಲ್ಲಿ ಏರಿಕೆ,ಉಸಿರಾಡಲು ಕಷ್ಟವಾಗುವುದು ಮತ್ತು ಸಾಯುತ್ತೇನೆಂಬ ಭೀತಿ

 ಲ್ಯಾಟ್ರೊಫೋಬಿಯಾ ನಿಮ್ಮನ್ನು ಕಾಡುತ್ತಿರುವ ರೋಗದ ಲಕ್ಷಣಗಳನ್ನು ನೀವು ಕಡೆಗಣಿಸುವಂತೆ ಮಾಡಬಹುದು ಮತ್ತು ಇದರಿಂದ ನೀವು ವೈದ್ಯಕೀಯ ನೆರವು ಪಡೆಯುವುದು ತೀರ ವಿಳಂಬವಾಗಬಹುದು. ಶೀತವುಂಟಾದಾಗ ವೈದ್ಯರ ಬಳಿಗೆ ತೆರಳಲು ಅದು ನ್ಯುಮೋನಿಯಾಕ್ಕೆ ತಿರುಗುವವರೆಗೆ ಕಾಯುವಂತಿಲ್ಲ.

ಲ್ಯಾಟ್ರೊಫೋಬಿಯಾಕ್ಕೆ ಕಾರಣಗಳು

ವೈದ್ಯಕೀಯ ಪರೀಕ್ಷೆಯಿಂದ ಆರೋಗ್ಯದ ಕುರಿತು ಕೆಟ್ಟ ಸುದ್ದಿ ಕೇಳಬೇಕಾಗಬಹುದು ಎಂಬ ಆತಂಕ, ವೈದ್ಯರ ಕ್ಲಿನಿಕ್‌ನಲ್ಲಿ ಅಥವಾ ಆಸ್ಪತ್ರೆಯಲ್ಲಿ ಇನ್ನೊಬ್ಬರಿಂದ ರೋಗ ತಗುಲಬಹುದು ಎಂಬ ಕಳವಳ, ಹಿಂದಿನ ಆಸ್ಪತ್ರೆ ಭೇಟಿಯಲ್ಲಿನ ಕೆಟ್ಟ ಅನುಭವದಿಂದ ಸೃಷ್ಟಿಯಾಗಿರಬಹುದಾದ ಭೀತಿ,ಆಸ್ಪತ್ರೆಯ ವಾತಾವರಣ ಮತ್ತು ಅಲ್ಲಿಯ ವಾಸನೆ,ರಕ್ತದ ಕುರಿತು ಭಯ,ಕ್ಲಾಸ್ಟ್ರೊಫೋಬಿಯಾ ಅಂದರೆ ಎಂಆರ್‌ಐ ಸ್ಕಾನ್ ಅಥವಾ ಸಿಟಿ ಸ್ಕಾನ್ ವೇಳೆ ಯಂತ್ರದೊಳಗೆ ತನ್ನನ್ನು ಸಾಗಿಸುತ್ತಾರೆ ಎಂಬ ಭೀತಿ,ವೈದ್ಯಕೀಯ ಪರೀಕ್ಷೆಯಿಂದ ನೋವಾಗುತ್ತದೆ ಎಂಬ ಭೀತಿ,ಚುಚ್ಚುಮದ್ದುಗಳ ಬಗ್ಗೆ ಹೆದರಿಕೆ,ನಿರೀಕ್ಷಿಸಿರದ ಅಥವಾ ತಪ್ಪು ರೋಗನಿರ್ಧಾರದ ಭೀತಿ ಇವು ಲ್ಯಾಟ್ರೊಫೋಬಿಯಾಕ್ಕೆ ಕೆಲವು ಕಾರಣಗಳಾಗಿವೆ.

ಕಾರಣವೇನೇ ಆಗಿರಲಿ,ವೈದ್ಯರ ಭೇಟಿ ಅಥವಾ ವೈದ್ಯಕೀಯ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳುವುದು ರೋಗವನ್ನು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚುವುದನ್ನು ವಿಳಂಬಿಸುತ್ತದೆ.

 ವೈದ್ಯರ ಬಗ್ಗೆ ಭೀತಿಯಿಂದ ಪಾರಾಗುವುದು ಹೇಗೆ?

ಬಹಳ ಹೊತ್ತು ಕಾಯುವುದನ್ನು ತಪ್ಪಿಸಲು ಬೆಳಿಗ್ಗೆ ಅಥವಾ ಸಂಜೆಯ ವೇಳೆಗೆ ವೈದ್ಯರೊಂದಿಗೆ ಭೇಟಿಗೆ ಸಮಯವನ್ನು ನಿಗದಿ ಮಾಡಿಕೊಳ್ಳಿ. ಕ್ಲಿನಿಕ್‌ನಲ್ಲಿ ಅಥವಾ ಆಸ್ಪತ್ರೆಯಲ್ಲಿ ಕಾಯುತ್ತಿರುವಾಗ ಪುಸ್ತಕ ಓದುತ್ತ ಅಥವಾ ನಿಮ್ಮ ನೆಚ್ಚಿನ ಸಂಗೀತವನ್ನು ಆಲಿಸುತ್ತ ಮನಸ್ಸನ್ನು ಅದರಲ್ಲಿ ತೊಡಗಿಸಿಕೊಳ್ಳಿ. ನಿಮ್ಮೊಂದಿಗೆ ನಿಮ್ಮ ಕುಟುಂಬದ ಸದಸ್ಯರು ಅಥವಾ ನಿಮ್ಮ ಆಪ್ತ ಸ್ನೇಹಿತರಿದ್ದರೆ ನಿಮಗೆ ಹಿತಕರವಾಗಿರುತ್ತದೆ ಮತ್ತು ವೈದ್ಯರೆದುರು ಒತ್ತಡದ ಸ್ಥಿತಿಯಲ್ಲಿ ಹೇಳಲು ನೀವು ಮರೆಯಬಹುದಾದ ಮುಖ್ಯ ವಿವರಗಳನ್ನು ಅವರು ಗಮನಿಸಲು ಸಾಧ್ಯವಾಗುತ್ತದೆ.

ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಎಲ್ಲ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ವೈದ್ಯರಿಗಿದೆ. ನಿಮ್ಮ ಆತಂಕ ಮತ್ತು ಭಯವನ್ನು ಅವರೊಂದಿಗೆ ಚರ್ಚಿಸುವುದರಿಂದ ಅವರು ನೆಮಗೆ ನೆರವಾಗಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News