×
Ad

2002ರ ನರೋಡಾ ಗಾಮ್ ಗಲಭೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ವರ್ಗಾವಣೆ

Update: 2020-03-08 19:19 IST

ಅಹ್ಮದಾಬಾದ್,ಮಾ.8: ಗುಜರಾತ್ ಉಚ್ಚ ನ್ಯಾಯಾಲಯವು ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ ಆರೋಪಿಯಾಗಿರುವ 2002ರ ನರೋಡಾ ಗಾಂವ್ ದಂಗೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಟ್ ನ್ಯಾಯಾಧೀಶ ಎಂ.ಕೆ.ದವೆ ಅವರನ್ನು ವಲ್ಸಾಡ್ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನಾಗಿ ವರ್ಗಾವಣೆಗೊಳಿಸಿದೆ. ದವೆ ಅವರ ಸ್ಥಾನಕ್ಕೆ ಭಾವನಗರ ಪ್ರಧಾನಿ ಜಿಲ್ಲಾ ನ್ಯಾಯಾಧೀಶ ಎಸ್.ಕೆ.ಬಕ್ಷಿ ಅವರನ್ನು ನಿಯೋಜಿಸಲಾಗಿದೆ.

ನ್ಯಾ.ದವೆ ಅವರು ನರೋಡಾ ಗಾಂವ್ ಪ್ರಕರಣದಲ್ಲಿ ಅಂತಿಮ ವಾದಗಳನ್ನು ಆಲಿಸುತ್ತಿದ್ದರು ಮತ್ತು ಕೊಡ್ನಾನಿ ಪರ ವಕೀಲರು ಕಳೆದ ವಾರ ಪ್ರಕರಣದಲ್ಲಿ ತನ್ನ ವಾದವನ್ನು ಆರಂಭಿಸಿದ್ದರು.

ಪ್ರಾಸಿಕ್ಯೂಷನ್‌ನ ಮತ್ತು ಹಲವಾರು ಆರೋಪಿಗಳ ಪರ ವಾದವಿವಾದಗಳು ಈಗಾಗಲೇ ಪೂರ್ಣಗೊಂಡಿವೆ. ನ್ಯಾ.ದವೆಯವರ ವರ್ಗಾವಣೆಯಿಂದಾಗಿ ನೂತನ ನ್ಯಾಯಾಧೀಶರು ಅಂತಿಮ ವಾದವಿವಾದಗಳನ್ನು ಮತ್ತೆ ಹೊಸದಾಗಿ ಆಲಿಸುವ ಸಾಧ್ಯತೆಯಿದೆ.

ನ್ಯಾಯಾಲಯವು ಫೆ.2018ರಲ್ಲಿ ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆಗಳ ದಾಖಲೀಕರಣ ಆರಂಭಿಸಿತ್ತು.

ದವೆ ಸೇರಿದಂತೆ 18 ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆೆಗೊಳಿಸಿರುವ ಗುಜರಾತ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು 17 ವಿಭಾಗಗಳ ಸೆಷನ್ಸ್ ನ್ಯಾಯಾಧೀಶರನ್ನೂ ನೇಮಕಗೊಳಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡ ವಿಶೇಷ ತನಿಖಾ ತಂಡ (ಸಿಟ್)ವು ತನಿಖೆ ನಡೆಸಿದ ಗುಜರಾತ್ ಕೋಮು ಗಲಭೆ ಸಂದರ್ಭದ ಒಂಭತ್ತು ಪ್ರಮುಖ ದಂಗೆ ಪ್ರಕರಣಗಳಲ್ಲಿ ಅಹ್ಮದಾಬಾದ್‌ನ ನರೋದಾ ಗಾಂವ್ ಹತ್ಯಾಕಾಂಡವು ಒಂದಾಗಿದೆ. ಈ ನರಮೇಧದಲ್ಲಿ ಅಲ್ಪಸಂಖ್ಯಾತ ಸಮುದಾಯದ 11 ಜನರು ಕೊಲ್ಲಲ್ಪಟ್ಟಿದ್ದರು.

ಪ್ರಕರಣದಲ್ಲಿ ಒಟ್ಟು 82 ಜನರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಆರೋಪಿಗಳ ಪೈಕಿ ಓರ್ವರಾಗಿರುವ ಕೊಡ್ನಾನಿ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News