ಶರೀರಕ್ಕೆ ತೆಂಗಿನಣ್ಣೆಯ ಅಭ್ಯಂಜನದ ಅದ್ಭುತ ಲಾಭಗಳು ನಿಮಗೆ ಗೊತ್ತೇ?

Update: 2020-03-08 13:51 GMT

ಹಿಂದೆಲ್ಲ ಜನರು ವಾರಕ್ಕೆ ಕನಿಷ್ಠ 3-4 ದಿನಗಳಾದರೂ ಮೈಗೆಲ್ಲ ತೆಂಗಿನೆಣ್ಣೆಯನ್ನು ಲೇಪಿಸಿಕೊಂಡು ಸ್ನಾನ ಮಾಡುತ್ತಿದ್ದರು. ಈಗಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಜೀವನವು ಗಡಿಬಿಡಿಯಿಂದ ಕೂಡಿರುವುದರಿಂದ ಈ ಅಭ್ಯಂಜನ ಸ್ನಾನವೀಗ ಕಡಿಮೆಯಾಗಿದೆ. ಹೆಚ್ಚಿನವರ ಅಭ್ಯಂಜನ ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರ ಸೀಮಿತವಾಗಿದೆ. ತೆಂಗಿನೆಣ್ಣೆಯ ಅಭ್ಯಂಜನದ ಮಹತ್ವ ಇಂದು ಹೆಚ್ಚಿನವರಿಗೆ ತಿಳಿದಿಲ್ಲ. ಅದು ನೀಡುವ ಅದ್ಭುತ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ....

ಅಲ್ಟ್ರಾವಯಲೆಟ್ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ

ಚರ್ಮಕ್ಕೆ ತೆಂಗಿನೆಣ್ಣೆಯನ್ನು ಲೇಪಿಸಿಕೊಳ್ಳುವುದರಿಂದ ಸೂರ್ಯನ ಹಾನಿಕಾರಕ ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಣೆ ದೊರೆಯುತ್ತದೆ. ಈ ಕಿರಣಗಳು ಚರ್ಮದ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ನಿರಿಗೆಗಳು ಹಾಗೂ ಕಪ್ಪುಕಲೆಗಳಿಗೆ ಕಾರಣವಾಗುತ್ತವೆ. ತೆಂಗಿನೆಣ್ಣೆಯು ಶೇ.20ರಷ್ಟು ಅಲ್ಟ್ರಾವಯಲೆಟ್ ಕಿರಣಗಳನ್ನು ತಡೆಯುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ತೆಂಗಿನೆಣ್ಣೆಯು ಬ್ಯಾಕ್ಟೀರಿಯಾಗಳ ವಿರುದ್ಧ ಪ್ರಬಲ ಅಸ್ತ್ರವಾಗಿದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿ ಪಾಚಿ ಕಟ್ಟುವಿಕೆ,ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡ ಆಹಾರದ ಕೊಳೆಯುವಿಕೆ ಮತ್ತು ವಸಡಿನ ರೋಗಕ್ಕೆ ಕಾರಣವಾಗುತ್ತವೆ. ಪ್ರತಿದಿನ ಹತ್ತು ನಿಮಿಷಗಳ ಕಾಲ ತೆಂಗಿನೆಣ್ಣೆಯಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಇದು ವಸಡುಗಳ ಊತ ಮತ್ತು ಹಲ್ಲುಗಳ ಪಾಚಿಯನ್ನೂ ಕಡಿಮೆ ಮಾಡುತ್ತದೆ. ತೆಂಗಿನೆಣ್ಣೆ ಹಲ್ಲುಗಳಿಗೆ ನಂಜುನಿರೋಧಕವಾಗಿ ಕೆಲಸ ಮಾಡುತ್ತದೆ.

ಚರ್ಮದ ಸಮಸ್ಯೆಗಳು ಮತ್ತು ಕಜ್ಜಿ

 ತೆಂಗಿನೆಣ್ಣೆಯು ಚರ್ಮದ ಸಮಸ್ಯೆಗಳನ್ನು ಮತ್ತು ಇತರ ಚರ್ಮರೋಗಗಳನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಕಜ್ಜಿಯಿಂದ ಬಳಲುತ್ತಿದ್ದ ಮಕ್ಕಳ ಮೇಲೆ ನಡೆಸಲಾದ ಅಧ್ಯಯನವೊಂದರಲ್ಲಿ ಚಿಕಿತ್ಸೆಗೆ ತೆಂಗಿನೆಣ್ಣೆ ಬಳಸಿದ್ದ ಮಕ್ಕಳಲ್ಲಿ ಗಣನೀಯ ಪ್ರಮಾಣದಲ್ಲಿ ಸಮಸ್ಯೆ ಕಡಿಮೆಯಾಗಿರುವುದು ಕಂಡು ಬಂದಿದೆ.

ಮಿದುಳಿನ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ

 ತೆಂಗಿನೆಣ್ಣೆಯಲ್ಲಿರುವ ಎಂಸಿಟಿ ಫ್ಯಾಟ್ ಎಂಬ ಕೊಬ್ಬನ್ನು ನಮ್ಮ ಯಕೃತ್ತು ಕಿಟೋನ್‌ಗಳಾಗಿ ಪರಿವರ್ತಿಸುತ್ತದೆ ಮತ್ತು ಇವು ಮಿದುಳಿಗೆ ಪರ್ಯಾಯ ಶಕ್ತಿಮೂಲ ವಾಗಿ ಕಾರ್ಯ ನಿರ್ವಹಿಸುತ್ತವೆ. ಅಪಸ್ಮಾರ ಮತ್ತು ಅಲ್ಜೀಮರ್ಸ್ ಸೇರಿದಂತೆ ಮಿದುಳಿನ ರೋಗಗಳಲ್ಲಿ ಎಂಸಿಟಿ ಫ್ಯಾಟ್ ಪರಿಣಾಮಕಾರಿಯಾಗಿ ಕೆಸ ಮಾಡುತ್ತದೆ. ಕಿಟೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ಎಂಸಿಟಿಯ ಮೂಲವಾಗಿ ತೆಂಗಿನೆಣ್ಣೆಯನ್ನು ಬಳಸುವಂತೆ ಕೆಲವು ಸಂಶೋಧಕರು ಶಿಫಾರಸು ಮಾಡಿದ್ದಾರೆ.

ಚರ್ಮವನ್ನು ಆರ್ದ್ರಗೊಳಿಸುತ್ತದೆ

ನಿಮ್ಮ ಕೈಗಳು,ಪಾದಗಳು ಮತ್ತು ಮೊಣಗಂಟುಗಳಿಗೆ ತೇವಾಂಶವನ್ನು ಒದಗಿಸುವಲ್ಲಿ ತೆಂಗಿನೆಣ್ಣೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಮುಖಕ್ಕೂ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳಬಹುದು. ಆದರೆ ನಿಮ್ಮ ಚರ್ಮವು ಅತಿಯಾದ ತೈಲಾಂಶದಿಂದ ಕೂಡಿದ್ದರೆ ಮತ್ತೆ ಎಣ್ಣೆಯನ್ನು ಲೇಪಿಸಿಕೊಳ್ಳುವ ಗೋಜಿಗೆ ಹೋಗದಿದ್ದರೆ ಒಳ್ಳೆಯದು. ಕಣಕಾಲುಗಳು ನೋಯುತ್ತಿದ್ದರೆ ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯನ್ನು ಲೇಪಿಸಿಕೊಂಡರೆ ನೋವು ಕಡಿಮೆಯಾಗುತ್ತದೆ.

ತಲೆಗೂದಲು ಉದುರುವುದನ್ನು ತಡೆಯುತ್ತದೆ

 ತಲೆಗೂದಲಿನ ಆರೋಗ್ಯವನ್ನು ಕಾಯ್ದುಕೊಳ್ಳಲು ತೆಂಗಿನೆಣ್ಣೆ ನೆರವಾಗುತ್ತದೆ. ತಲೆಗೂದಲಿಗೆ ಶಾಂಪೂ ಬಳಸುವ ಮೊದಲು ಅಥವಾ ಬಳಸಿದ ನಂತರ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ತಲೆಗೂದಲು ಉದುರುವುದು ಗಣನೀಯವಾಗಿ ಕಡಿಮೆಯಾಗುತ್ತದೆ. ತೆಂಗಿನೆಣ್ಣೆಯಲ್ಲಿನ ಮುಖ್ಯ ಫ್ಯಾಟಿ ಆ್ಯಸಿಡ್‌ಗಳ ವಿಶಿಷ್ಟ ಸಂಯೋಜನೆಯು ಕೂಲನ್ನು ಮೃದುವಾಗಿಸಲು ನೆರವಾಗುತ್ತದೆ.

ಗಾಯಗಳನ್ನು ಗುಣಪಡಿಸುತ್ತದೆ

ಸಣ್ಣಪುಟ್ಟ ಗಾಯಗಳ ಮೇಲೆ ನೇರವಾಗಿ ತೆಂಗಿನೆಣ್ಣೆಯನ್ನು ಲೇಪಿಸಿ ಬ್ಯಾಂಡೇಜ್‌ನಿಂದ ಮುಚ್ಚಿದರೆ ಗಾಯಗಳು ಬಹುಬೇಗನೆ ಮಾಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News