ನಾರಿ ಶಕ್ತಿ ಎನ್ನುವ ಸರಕಾರ ಶಾಹೀನ್ ಬಾಗ್ ನ ಮಹಿಳೆಯರಿಗೆ ಹೆದರಿದೆ: ಇಲ್ತಿಜಾ ಮುಫ್ತಿ
ಶ್ರೀನಗರ,ಮಾ.8: ಕೇಂದ್ರ ಸರಕಾರವು ಅತ್ಯಂತ ಹೆಚ್ಚು ಹೆದರಿಕೊಂಡಿರುವುದು ಮಹಿಳೆಯರಿಗೆ,ಹೀಗಾಗಿ ಅದು ಮಹಿಳೆಯರ ಹ್ಯಾಷ್‌ಟ್ಯಾಗ್‌ಗಳ ನಾಟಕವನ್ನು ಕೈಬಿಡಬೇಕು ಎಂದು ಪಿಡಿಪಿ ಅಧ್ಯಕ್ಷೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ರವಿವಾರ ಹೇಳಿದ್ದಾರೆ.
ಪ್ರಚಲಿತ ಬೆಳವಣಿಗೆಗಳು ಮತ್ತು ಘಟನೆಗಳಿಗೆ ಪ್ರತಿಕ್ರಿಯಿಸಲು ತನ್ನ ತಾಯಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಬಳಸುತ್ತಿರುವ ಇಲ್ತಿಜಾ,‘ಮಹಿಳೆಯರ ಹೆಸರಿನಲ್ಲಿ ತಮಾಷೆಗಳನ್ನು ನಿಲ್ಲಿಸಿ. ಭಾರತ ಸರಕಾರವು ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯನ್ನು ಅಕ್ರಮವಾಗಿ ಜೈಲಿಗೆ ತಳ್ಳಿದೆ. ಧೀರ ಮಹಿಳಾ ಪತ್ರಕರ್ತರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಉತ್ತೇಜಿಸುತ್ತಿದೆ ಮತ್ತು ಶಾಹೀನ್‌ಬಾಗ್‌ನ ಅಜ್ಜಿಯಂದಿಯರಿಗೆ ಹೆದರಿಕೊಂಡಿದೆ. ನಾರಿ ಶಕ್ತಿಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಅವರು ಅತ್ಯಂತ ಹೆಚ್ಚಾಗಿ ಹೆದರುತ್ತಿರುವುದು ನಾರಿಯರಿಗೇ’ ಎಂದು ಟ್ವೀಟಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆಯನ್ನು ಮಹಿಳಾ ಸಾಧಕಿಯರಿಗೆ ಒಪ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ ಬೆನ್ನಿಗೇ ಇಲ್ತಿಜಾರ ಈ ಟ್ವೀಟ್ ಹೊರಬಿದ್ದಿದೆ.