ಇರಾನ್‌ನಲ್ಲಿ ಕೊರೋನ ಅಟ್ಟಹಾಸ: 24 ತಾಸುಗಳಲ್ಲಿ 49 ಮಂದಿ ಸಾವು
Update: 2020-03-08 21:12 IST
ಟೆಹರಾನ್,ಮಾ.8: ಇರಾನ್‌ನಲ್ಲಿ ನೊವೆಲ್ ಕೊರೋನ ವೈರಸ್ ಸೋಂಕಿನಿಂದ ಹೊಸದಾಗಿ 49 ಸಾವುಗಳು ಸಂಭವಿಸಿದೆಯೆಂದು ಇರಾನ್ ನ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ. ವೈರಸ್ ಹಾವಳಿ ಆರಂಭವಾದ ಬಳಿಕ ಇರಾನ್‌ನಲ್ಲಿ ಕೇವಲ 24 ತಾಸುಗಳ ಅವಧಿಯಲ್ಲಿ ಅತ್ಯಧಿಕ ಸಾವು ಸಂಭವಿಸಿರುವುದು ಇದೇ ಮೊದಲ ಸಲವಾಗಿದೆ.
ಇದರೊಂದಿಗೆ ಫೆಬ್ರವರಿ ತಿಂಗಳ ಮಧ್ಯದಿಂದ ಈತನಕ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 194ಕ್ಕೇರಿದೆ. ಕೊರೋನ ವೈರಸ್ ಸೋಂಕಿನ ಉಗಮಸ್ಥಾನವಾದ ಚೀನಾವನ್ನು ಹೊರತುಪಡಿಸಿದರೆ, ಇರಾನ್‌ನಲ್ಲಿ ಈ ರೋಗದಿಂದಾಗಿ ಅತ್ಯಧಿಕ ಸಂಖ್ಯೆಯ ಸಾವುಗಳು ಸಂಭವಿಸಿವೆ. ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್‌ನಲ್ಲಿ ಮಾರಣಾಂತಿಕ ಕೊರೋನ ವೈರಸ್ ಸೋಂಕು 31 ಪ್ರಾಂತಗಳಿಗೆ ವ್ಯಾಪಿಸಿದ್ದು, ಈ ಪೈಕಿ 6566 ಪ್ರಕರಣಗಳು ದೃಢಪಟ್ಟಿವೆ.