ಐಸಿಸ್ ನಂಟು ಆರೋಪ: ಕಾಶ್ಮೀರದ ದಂಪತಿ ಬಂಧನ
Update: 2020-03-08 21:59 IST
ಹೊಸದಿಲ್ಲಿ, ಮಾ. 8: ಅಫಘಾನಿಸ್ಥಾನದ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರೊವಿನ್ಸ್ (ಐಎಸ್‌ಕೆಪಿ)ನ ಸದಸ್ಯರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಕಾಶ್ಮೀರದ ದಂಪತಿಯನ್ನು ಆಗ್ನೇಯ ದಿಲ್ಲಿಯ ಜಾಮಿಯಾ ನಗರದಿಂದ ಪೊಲೀಸರು ರವಿವಾರ ಬಂಧಿಸಿದ್ದಾರೆ.
ದಂಪತಿಯನ್ನು ಜಹಾನ್‌ಜೇಬ್ ಹಾಗೂ ಅವರ ಪತ್ನಿ ಹೀನಾ ಬಶಿರ್ ಬೇಗ್ ಎಂದು ಗುರುತಿಸಲಾಗಿದೆ ಎಂದು ದಿಲ್ಲಿ ಉಪ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಲಾಭ ಪಡೆದುಕೊಂಡು ಮುಸ್ಲಿಂ ಯುವಕನ್ನು ಉತ್ತೇಜಿಸಿ ಭಯೋತ್ಪಾದನೆ ದಾಳಿ ನಡೆಸುವ ಉದ್ದೇಶವನ್ನು ಇವರು ಹೊಂದಿದ್ದರು ಎಂದು ಕುಶ್ವಾಹ್ ಆರೋಪಿಸಿದ್ದಾರೆ. ಗುಪ್ತಚರ ಸಂಸ್ಥೆ ಮಾಹಿತಿ ತಿಳಿದ ಬಳಿಕ ರವಿವಾರ ಬೆಳಗ್ಗೆ ದಂಪತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ತನಿಖೆ ಮುಂದುವರಿದಿದೆ. ಹಲವು ತನಿಖಾ ಸಂಸ್ಥೆಗಳು ಅವರ ವಿಚಾರಣೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.