×
Ad

ಸ್ಮಾರ್ಟ್ ಸಿಟಿ ಯೋಜನೆ ಉದ್ಘಾಟಿಸಿ ಮೋರಿಗೆ ಬಿದ್ದ ಸಚಿವ!

Update: 2020-03-09 20:59 IST

ಚೆನ್ನೈ: ಮಧುರೈ ಸಮೀಪದ ಸೆಲ್ಲೂರ್‌ನಲ್ಲಿ ರವಿವಾರ ಸ್ಮಾರ್ಟ್ ಸಿಟಿ ಯೋಜನೆಯೊಂದನ್ನು ಉದ್ಘಾಟಿಸುವಾಗ ತಮಿಳುನಾಡಿನ ಸಚಿವರೊಬ್ಬರು ಒಳಚರಂಡಿ ಗುಂಡಿಗೆ ಬಿದ್ದು, ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ. ಜೊತೆಗಿದ್ದ ಎಐಎಡಿಎಂಕೆಯ ಮೂವರು ಕಾರ್ಯಕರ್ತರು ಒಳಚರಂಡಿ ಗುಂಡಿಗೆ ಬಿದ್ದಿದ್ದು, ತಕ್ಷಣ ಅವರನ್ನು ರಕ್ಷಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

'ಸ್ವಚ್ ಐಕಾನಿಕ್ ಪ್ಲೇಸ್' (ಎಸ್‌ಐಪಿ) ಯ ಅಡಿಯಲ್ಲಿ ನಿರ್ಮಿಸಲಾದ ಈ ಯೋಜನೆಯನ್ನು ಉದ್ಘಾಟಿಸಲು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರನ್ನು ಆಹ್ವಾನಿಸಲಾಗಿತ್ತು.

ಮಧುರೈ ಕಾರ್ಪೊರೇಷನ್ ನಗರದಾದ್ಯಂತ ಹಲವಾರು 'ಟ್ರಾಫಿಕ್ ಐಲಂಡ್'ಗಳನ್ನು ನಿರ್ಮಿಸುತ್ತಿದೆ. ಈ ಪ್ರತಿಯೊಂದು 'ಟ್ರಾಫಿಕ್ ಐಲಂಡ್'ಗಳಲ್ಲಿ, ನಗರದ ಶ್ರೀಮಂತ ಇತಿಹಾಸವನ್ನು ತಿಳಿಸುವ ರಚನೆಗಳನ್ನು ನಿರ್ಮಿಸಲಾಗಿದೆ.

ಪಾಲಗನಾಥಂ ಮತ್ತು ವಿಲಂಗುಡಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ, ಮಧುರೈ ಕಾರ್ಪೊರೇಶನ್ ಅಧಿಕಾರಿಗಳು ಎಸ್‌ಐಪಿ ಅಡಿಯಲ್ಲಿ ನಗರ ಸೌಂದರ್ಯೀಕರಣ ಯೋಜನೆಯ 2 ನೇ ಸುತ್ತನ್ನು ಪ್ರಾರಂಭಿಸಿದರು. ಸೆಲ್ಲೂರ್‌ನಲ್ಲಿ ಕಬಡ್ಡಿ ಆಟಗಾರರನ್ನು ಗೌರವಿಸುವ ಸಲುವಾಗಿ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿದ್ದ ಈ ಯೋಜನೆಯನ್ನು ಸಚಿವ ರಾಜು ಉದ್ಘಾಟಿಸುತ್ತಿದ್ದರು.

ಸಚಿವರು ಮಾತನಾಡುತ್ತಿದ್ದಂತೆ ಒಳಚರಂಡಿ ಪೈಪ್‌ಲೈನ್ ಮೇಲಿನ ಸ್ಲ್ಯಾಬ್ ಕುಸಿದಿದೆ.

ಸ್ಥಳೀಯ ವರದಿಗಳ ಪ್ರಕಾರ, ಘಟನೆ ನಡೆದಾಗ ಸುಮಾರು 15 ಸದಸ್ಯರು ಅಲ್ಲಿ ನಿಂತಿದ್ದರು. ಟ್ರಾಫಿಕ್ ದ್ವೀಪ ಅಡಿಯಲ್ಲಿ ಹಾದುಹೋಗುವ ಒಳಚರಂಡಿ ಪೈಪ್‌ಲೈನ್ ಒಳಗೆ ಸೋರಿಕೆ ಸಂಭವಿಸಿದ್ದು, ಇದು ಘಟನೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News