×
Ad

ಪ್ರಿಯಾಂಕಾ ಗಾಂಧಿಯಿಂದ 2 ಕೋ.ರೂ.ಪೈಂಟಿಂಗ್ ಖರೀದಿಸಿದ್ದ ರಾಣಾ ಕಪೂರ್: ಈ.ಡಿ.ಯಿಂದ ತನಿಖೆ

Update: 2020-03-09 21:27 IST

ಮುಂಬೈ,ಮಾ.9: ಜಾರಿ ನಿರ್ದೇಶನಾಲಯ (ಈ.ಡಿ)ವು ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರಿಂದ ಖರೀದಿಸಿದ್ದ ವರ್ಣ ಕಲಾಕೃತಿಗೆ ಸಂಬಂಧಿಸಿದಂತೆ ತನಿಖೆಯನ್ನು ಆರಂಭಿಸಿದೆ.

ಪ್ರಿಯಾಂಕಾರ ಬಳಿಯಿದ್ದ ಎಂ.ಎಫ್.ಹುಸೇನ್ ರಚಿಸಿದ್ದ ಈ ಕಲಾಕೃತಿಯನ್ನು ಕಪೂರ್ ಎರಡು ಕೋ.ರೂ.ಗೆ ಖರೀದಿಸಿದ್ದರು ಎಂದು ಈ.ಡಿ ಹೇಳಿದೆ.

ಕಲಾಕೃತಿ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿತ್ತೇ ಹೊರತು ಪ್ರಿಯಾಂಕಾರದ್ದಲ್ಲ,ಆದರೂ ಅವರು ಕಪೂರ್‌ಗೆ ಅದನ್ನು ಮಾರಿದ್ದರು. ಆಗ ಯೆಸ್ ಬ್ಯಾಂಕ್ ನಿರ್ದೇಶಕರಾಗಿದ್ದ ಕಪೂರ್‌ಗೆ ಆ ಕಲಾಕೃತಿಯನ್ನು ಖರೀದಿಸುವಂತೆ ಕಾಂಗ್ರೆಸ್ ನಾಯಕ ಮಿಲಿಂದ ದೇವರಾ ಅವರು ಮನವೊಲಿಸಿದ್ದರು ಎಂದು ಕಾಂಗ್ರೆಸ್‌ನಲ್ಲಿನ ಮೂಲಗಳು ತಿಳಿಸಿವೆ.

ಕಲಾಕೃತಿಯ ನೈಜಬೆಲೆ ಎಷ್ಟೆಂದು ಯಾರಿಗೂ ಗೊತ್ತಿಲ್ಲ,ಆದರೂ ಕಪೂರ್ ಅದನ್ನು ಎರಡು ಕೋ.ರೂ.ಗೆ ಖರೀದಿಸಿದ್ದರು. ಕಪೂರ್ ಆಸ್ತಿಗಳಲ್ಲಿ ಹೂಡಿಕೆ ಮಾಡಿರುವ ಪ್ರತಿಯೊಂದೂ ಮೊತ್ತವು ಅಪರಾಧಗಳ ಮೂಲಕವೇ ಗಳಿಸಿದ್ದು,ಕಲಾಕೃತಿಯನ್ನು ಖರೀದಿಸಲು ಬಳಸಿದ್ದ ಎರಡು ಕೋ.ರೂ.ಕೂಡ ಅದೇ ಮೂಲದ್ದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಕಪೂರ್ ಬಳಿಯಲ್ಲಿ 40ಕ್ಕೂ ಅಧಿಕ ಅಮೂಲ್ಯ ಕಲಾಕೃತಿಗಳಿವೆ. ಕಲಾಕೃತಿಗಳನ್ನು ಖರೀದಿಸುವಾಗ ಕಪೂರ್ ಅವುಗಳ ಮೌಲ್ಯಮಾಪನಕ್ಕಾಗಿ ತಜ್ಞರಿಂದ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಪ್ರಿಯಾಂಕಾರಿಂದ ಖರೀದಿಸಿದ್ದ ಕಲಾಕೃತಿಗಾಗಿ ಅವರು ಇಂತಹ ಪ್ರಮಾಣಪತ್ರವನ್ನು ಪಡೆದುಕೊಂಡಿರಲಿಲ್ಲ ಎಂದೂ ಈ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News