ಜಾಗತಿಕ ಮಾರುಕಟ್ಟೆಯಲ್ಲಿ ತಳ ಕಚ್ಚಿದ ಕಚ್ಚಾ ತೈಲ: ದೇಶದಲ್ಲಿ 71ರೂ.ಗಿಂತ ಕೆಳಗಿಳಿದ ಪೆಟ್ರೋಲ್ ಬೆಲೆ
ಹೊಸದಿಲ್ಲಿ,ಮಾ.9: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಸುಮಾರು ಶೇ.31ರಷ್ಟು ಕುಸಿದಿದ್ದು,ದೇಶದಲ್ಲಿ ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್‌ಗೆ 71 ರೂ.ಗಿಂತ ಕೆಳಗಿಳಿದಿವೆ. ತೈಲ ಉತ್ಪಾದಕ ದೇಶಗಳ ನಡುವಿನ ಬೆಲೆ ಸಮರದ ಲಾಭ ಪಡೆಯಲು ಭಾರತ ಸಜ್ಜಾಗಿದೆ. 1991ರ ಕೊಲ್ಲಿ ಸಮರದ ಬಳಿಕ ಜಾಗತಿಕ ಕಚ್ಚಾ ತೈಲ ಬೆಲೆಗಳು ಅತ್ಯಂತ ದೊಡ್ಡ ಕುಸಿತಕ್ಕೆ ಸಾಕ್ಷಿಯಾಗಿವೆ.
ಬ್ರೆಂಟ್ ಕ್ರೂಡ್ ವಾಯಿದಾ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 31 ಅಮೆರಿಕನ್ ಡಾಲರ್‌ಗೆ ಕುಸಿದಿದ್ದು,ಇದು ದಾಖಲೆಯಲ್ಲಿನ ಎರಡನೇ ಬೃಹತ್ ಕುಸಿತವಾಗಿದೆ. ಇದೇ ವೇಳೆ ಗೋಲ್ಡ್‌ಮನ್ ಸ್ಯಾಚ್ಸ್ ಬೆಲೆಗಳು ಸುಮಾರು 20 ಡಾಲರ್‌ಗಳಿಗೆ ಕುಸಿಯಬಹುದು ಎಂದು ಎಚ್ಚರಿಕೆಯನ್ನು ನೀಡಿದೆ.
ಈ ಕುಸಿತದಿಂದ ತನ್ನ ಶೇ.84ಕ್ಕೂ ಅಧಿಕ ತೈಲ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತದ ಆಮದು ಮೊತ್ತ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ ಮತ್ತು ಚಿಲ್ಲರೆ ಮಾರಾಟ ಬೆಲೆಗಳು ಇಳಿಯಲಿವೆ,ಆದರೆ ಈಗಾಗಲೇ ಒತ್ತಡದಲ್ಲಿರುವ ಒಎನ್‌ಜಿಸಿಯಂತಹ ತೈಲ ಕಂಪನಿಗಳಿಗೆ ಸಂಕಷ್ಟವನ್ನುಂಟು ಮಾಡಲಿದೆ. ಇದೇ ವೇಳೆ ಕಡಿಮೆ ತೈಲ ಬೆಲೆಗಳು ಹಲವಾರು ಉದ್ಯಮ ಕ್ಷೇತ್ರಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸುವುದರಿಂದ 11 ವರ್ಷಗಳ ಕನಿಷ್ಠ ಮಟ್ಟದಲ್ಲಿರುವ ಜಿಡಿಪಿ ದರವನ್ನು ಮೇಲಕ್ಕೆತ್ತುವ ಮೂಲಕ ಆರ್ಥಿಕತೆಗೆ ನೆರವಾಗಲಿದೆ.
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಸೋಮವಾರ ಪ್ರತಿ ಲೀ.ಗೆ 70.59ಕ್ಕಿಳಿದಿದ್ದು,ಇದು ಜುಲೈ 2019ರಿಂದೀಚಿಗೆ ಕನಿಷ್ಠವಾಗಿದೆ. ಡೀಸಿಲ್ ಬೆಲೆ ಪ್ರತಿ ಲೀ.ಗೆ 63.26ಕ್ಕೆ ಇಳಿದಿದೆ.
ಅಂತರರಾಷ್ಟ್ರೀಯ ಪ್ರವೃತ್ತಿಯನ್ನು ಅನುಸರಿಸಿ ಫೆ.27ರಿಂದ ಇಂಧನ ಬೆಲೆಗಳಲ್ಲಿ ಇಳಿಕೆಯಾಗತೊಡಗಿತ್ತು. ಆಗಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀ.ಗೆ ಅನುಕ್ರಮವಾಗಿ 1.42 ರೂ. ಮತ್ತು 1.44 ರೂ.ಇಳಿದಿವೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿದಿರುವ ಖುಷಿಯ ನಡುವೆ ಅಮೆರಿಕದ ಡಾಲರ್‌ನೆದುರು ರೂಪಾಯಿ ಮೌಲ್ಯ 23 ಪೈಸೆ ಕುಸಿದು 74.10ಕ್ಕೆ ತಲುಪಿರುವುದು ಹೊಸ ತಲೆನೋವನ್ನು ಸೃಷ್ಟಿಸಿದೆ. ರೂಪಾಯಿ ದುರ್ಬಲಗೊಂಡರೆ ಭಾರತವು ತನ್ನ ಆಮದುಗಳಿಗಾಗಿ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದು ಹಣದುಬ್ಬರ ದರವನ್ನು ತಗ್ಗಿಸಲೂ ನೆರವಾಗಲಿದೆ.
ಜಾಗತಿಕ ಕಚ್ಚಾತೈಲಗಳ ಬೆಲೆಯಲ್ಲಿ ಪ್ರತಿ ಒಂದು ಡಾಲರ್ ಬದಲಾವಣೆಯು ಭಾರತದ ತೈಲ ಆಮದು ಬಿಲ್‌ನ ಮೇಲೆ 2,936 ಕೋ.ರೂ.ಗಳ ಪರಿಣಾಮವನ್ನುಂಟು ಮಾಡುತ್ತದೆ. ಇದೇ ರೀತಿ ವಿನಿಮಯ ದರದಲ್ಲಿ ಪ್ರತಿ ಡಾಲರ್‌ಗೆ ಒಂದು ರೂ.ಬದಲಾವಣೆಯು ಕಚ್ಚಾ ತೈಲ ಆಮದು ಬಿಲ್‌ನ ಮೇಲೆ 2,729 ಕೋ.ರೂ.ಗಳ ಪರಿಣಾಮವನ್ನುಂಟು ಮಾಡುತ್ತದೆ.
ಎಪ್ರಿಲ್‌ನಿಂದ ಆರಂಭವಾಗುವ ಹೊಸ ವಿತ್ತ ವರ್ಷದಲ್ಲಿ ತೈಲ ಆಮದು ಬಿಲ್ ಕಡಿಮೆಯಾಗಲಿದೆ,ಆದರೆ ತೈಲ ಬೆಲೆಗಳಲ್ಲಿ ಮತ್ತು ಕರೆನ್ಸಿ ಮಾರುಕಟ್ಟೆಯಲ್ಲಿನ ತೀವ್ರ ಏರಿಳಿತಗಳಿಂದ ಎಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸುವುದು ಸಾಧ್ಯವಿಲ್ಲ ಎಂದು ತೈಲ ಕಂಪನಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಹಾಲಿ ಚಿಲ್ಲರೆ ಮಾರಾಟ ದರಗಳು ಜಾಗತಿಕ ಬೆಲೆಗಳಲ್ಲಿನ ಕುಸಿತವನ್ನು ಪ್ರತಿಫಲಿಸುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಚಿಲ್ಲರೆ ಮಾರಾಟ ಬೆಲೆಗಳು ಖಂಡಿತ ಕಡಿಮೆಯಾಗಲಿವೆ ಎಂದರು. ಶೇ.31 ಕುಸಿತವು ಮುಂದಿನ ಏಳೆಂಟು ದಿನಗಳಲ್ಲಿ ಚಿಲ್ಲರೆ ಬೆಲೆಗಳಲ್ಲಿ ಪ್ರತಿಫಲಿಸಲಿದೆ ಎಂದರು.
ತೈಲಬೆಲೆ ಕುಸಿತದ ಋಣಾತ್ಮಕ ಅಂಶವೆಂದರೆ ನವೀಕರಿಸಬಲ್ಲ ಶಕ್ತಿಗೆ ಹೋಲಿಸಿದರೆ ಇಂಧನ ಬೆಲೆಗಳು ಅಗ್ಗವಾಗುವುದರಿಂದ ಹವಾಮಾನ ಬದಲಾವಣೆಯ ವಿರುದ್ಧ ಹೋರಾಟದಲ್ಲಿ ಸ್ವಚ್ಛ ಇಂಧನಕ್ಕೆ ಪರಿವರ್ತನೆ ವಿಳಂಬಗೊಳ್ಳಲಿದೆ.