ಅಂತರ್‌ಧರ್ಮೀಯ ದಂಪತಿಗೆ ರಕ್ಷಣೆ ನೀಡಲು ಸುಪ್ರೀಂ ಸೂಚನೆ
ಹೊಸದಿಲ್ಲಿ, ಮಾ. 9: ರಾಜಸ್ಥಾನದ ಅಂತರ್‌ಧರ್ಮೀಯ ವಿವಾಹವಾದ ದಂಪತಿ ವಿರುದ್ಧ ಯಾವುದೇ ದಬ್ಬಾಳಿಕ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ರಾಜಸ್ಥಾನ, ದಿಲ್ಲಿ ಹಾಗೂ ಉತ್ತರಪ್ರದೇಶ ಪೊಲೀಸರಿಗೆ ನಿರ್ದೇಶಿಸಿದೆ ಹಾಗೂ ಅಗತ್ಯ ಇದ್ದರೆ, ಅವರಿಗೆ ಸಾಕಷ್ಟು ಭದ್ರತೆ ನೀಡುವಂತೆ ಸೂಚಿಸಿದೆ. ವಿವಾಹಿತ ದಂಪತಿ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡ ರಜಾಕಾಲದ ಪೀಠ ಹೇಳಿದೆ.
ರಾಜಸ್ಥಾನದ ಜೈಪುರ ಮೂಲದ ಈ ದಂಪತಿ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಈ ದಂಪತಿ ಈ ವರ್ಷ ಪೆಬ್ರವರಿ 28ರಂದು ಆರ್ಯ ಸಮಾಜದಲ್ಲಿ ವಿವಾಹವಾಗಿದ್ದರು ಹಾಗೂ 2020 ಮಾರ್ಚ್ 2ರಂದು ವಿವಾಹ ನೋಂದಣಿ ಮಾಡಿದ್ದರು. ಈ ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದವರು. ಈಗಾಗಲೇ ಬೆದರಿಕೆ ಒಡ್ಡಿರುವ ಮಹಿಳೆಯ ಕುಟುಂಬದಿಂದೆ ಹಲ್ಲೆ ಭೀತಿಯ ಹಿನ್ನೆಲೆಯಲ್ಲಿ ದಂಪತಿ ಸುಪ್ರೀಂ ಕೋರ್ಟ್‌ನ ರಕ್ಷಣೆ ಕೋರಿದ್ದರು. ಅಲ್ಲದೆ, ಈ ಹಿಂದೆ ಈ ವಿಷಯಕ್ಕೆ ಸಂಬಂಧಿಸಿ ಜೈಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.