ದಿಲ್ಲಿ: ಹಿಂಸಾಚಾರ ಮರುಕಳಿಸುವ ಭೀತಿಯಲ್ಲಿ ಸ್ಥಳೀಯರು

Update: 2020-03-09 17:51 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ.9: ದಿಲ್ಲಿಯನ್ನು ಕಂಗೆಡಿಸಿದ್ದ ಹಿಂಸಾಚಾರ ನಡೆದು ಎರಡು ವಾರ ಕಳೆದರೂ ಪರಿಸರದ ಜನತೆಯ ಮನದಲ್ಲಿ ಭೀತಿ ಮತ್ತು ಆತಂಕ ಇನ್ನೂ ಮರೆಯಾಗಿಲ್ಲ. ಹಿಂಸಾಚಾರ ಮತ್ತೆ ಮರುಕಳಿಸಬಹುದು ಎಂಬ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ದಿಲ್ಲಿ ಹಿಂಸಾಚಾರದ ಅಮಾನುಷತೆಯನ್ನು ನೆನಪಿಸಿಕೊಂಡರೇ ಬೆಚ್ಚಿ ಬೀಳುವ ಪರಿಸ್ಥಿತಿಯಿದೆ. ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಅತ್ಯಂತ ಹೆಚ್ಚು ನಾಶ, ನಷ್ಟಕ್ಕೆ ಈಡಾದ ಪ್ರದೇಶಗಳಲ್ಲಿ ಒಂದಾಗಿರುವ ಶಿವವಿಹಾರದ ಬಹುತೇಕ ಜನತೆ ಈಗ ಸರಕಾರ ಒದಗಿಸಿರುವ ಶಿಬಿರದಲ್ಲಿ ಅಥವಾ ತಮ್ಮ ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದಾರೆ. ಆದರೆ ದಿನಾ ಬೆಳಿಗ್ಗೆದ್ದು ಈ ಹಿಂದೆ ತಮ್ಮ ಮನೆ, ಅಂಗಡಿಯಿದ್ದ ಆದರೆ ಈಗ ಭಗ್ನಾವಶೇಷ ಮಾತ್ರ ಉಳಿದಿರುವ ಪ್ರದೇಶಕ್ಕೆ ಬರುತ್ತಾರೆ. ಕತ್ತಲಾವರಿಸುತ್ತಿದ್ದಂತೆ ಅಲ್ಲಿಂದ ಆದಷ್ಟು ಬೇಗ ಶಿಬಿರಕ್ಕೆ ವಾಪಸಾಗುತ್ತಿದ್ದಾರೆ ಎಂದು ವರದಿಯಾಗಿದೆ.

 ಹಿಂಸಾಚಾರದ ನಂತರ ಚಮನ್‌ಪಾರ್ಕ್ ಪ್ರದೇಶದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದ ನಝರ್ ಮುಹಮ್ಮದ್ , ತಾನಿನ್ನು ಶಿವವಿಹಾರಕ್ಕೆ ಮರಳಿ ಬರುವುದೇ ಇಲ್ಲ ಎಂದು ಗಟ್ಟಿ ನಿರ್ಧಾರ ತಳೆದಿದ್ದಾರೆ. ಈ ಪ್ರದೇಶದ ಬಹುತೇಕ ಮನೆಗಳ ಬಾಗಿಲು ಮತ್ತು ಕಿಟಕಿಗೆ ಬಾಗಿಲುಗಳೇ ಇಲ್ಲ ಎಂಬಂತಾಗಿದೆ. ಗಲಭೆಕೋರರು ಬಾಗಿಲು ಮುರಿದು ಮನೆಯೊಳಗಿದ್ದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾರೆ. ಹಿಂಸಾಚಾರದಿಂದ ಕಂಗೆಟ್ಟಿದ್ದ ತಮಗೆ ಫೆಬ್ರವರಿ 26ರಂದು ಪೊಲೀಸರು ಬಂದು ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ಸೂಚಿಸಿದಾಗ ಚಪ್ಪಲಿಯನ್ನು ಕೂಡಾ ಧರಿಸದೆ ಓಡಿದ್ದೇವೆ. ಆದರೆ ಮರುದಿನ ಬಂದು ನೋಡುವಾಗ ಮನೆಯೊಳಗೆ ಉಳಿದಿದ್ದ ವಸ್ತುಗಳನ್ನೂ ದೋಚಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಎರಡು ವಾರದ ಹಿಂದೆ ಇಲ್ಲೇ ನನ್ನ ಮನೆಯಿತ್ತು. ಎರಡು ಮಹಡಿಯ ಮನೆಯದು. ರಾತ್ರಿಯಾಗುತ್ತಿದ್ದಂತೆಯೇ ಮನೆಯ ಸದಸ್ಯರೆಲ್ಲರೂ ಅಂಗಳದಲ್ಲಿ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದೆವು. ಆದರೆ ಈಗ ಇಲ್ಲಿ ಕಲ್ಲು, ಮಣ್ಣಿನ ರಾಶಿಯಿದೆ. ಮನೆಯೆದುರು ಸುಟ್ಟುಹೋದ ಬೈಕ್‌ಗಳಿವೆ. ಸಂಜೆಗತ್ತಲು ಆವರಿಸುತ್ತಿದ್ದಂತೆಯೇ ಇಲ್ಲಿಂದ ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ಧಾವಿಸುವ ಪರಿಸ್ಥಿತಿಯಿದೆ ಎನ್ನುತ್ತಾರೆ ಶಿವವಿಹಾರ ಪ್ರದೇಶದ ನಿವಾಸಿ ಮುಹಮ್ಮದ್ ಗಯೂರ್.

ಈಗ ಹಿಂಸಾಚಾರ ಕೊನೆಗೊಂಡಿದೆ ಎಂದು ಸರಕಾರ ಹೇಳುತ್ತಿದ್ದರೂ ಪರಿಸರದ ಜನತೆ ಬೈಕ್‌ನ ಸದ್ದು ಕೇಳಿದರೇ ಬೆಚ್ಚಿ ಬೀಳುವಂತಾಗಿದೆ. ಇಲ್ಲಿ ರಾತ್ರಿ ಉಳಿದುಕೊಳ್ಳುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಆತಂಕ ತೋಡಿಕೊಳ್ಳುತ್ತಾರೆ ಸ್ಥಳೀಯರು. ಹಿಂಸಾಚಾರದ ಕಾರಣದಿಂದ ಸೈಫ್ ಎಂಬ ವಿದ್ಯಾರ್ಥಿಗೆ 8ನೇ ತರಗತಿಯ ಅಂತಿಮ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಪ್ರದೇಶದ ಗಲ್ಲಿಯಲ್ಲಿ ಆಡಿ ಬೆಳೆದ ತನಗೆ ಈಗ ಇಲ್ಲಿ ಒಬ್ಬಂಟಿಯಾಗಿ ಅಡ್ಡಾಡಲೂ ಹೆದರಿಕೆಯಾಗುತ್ತಿದೆ. ಅಪರಿಚಿತ ದುಷ್ಕರ್ಮಿಗಳು ಯಾವಾಗ ದಾಳಿ ನಡೆಸುತ್ತಾರೆ ಎಂಬ ಆತಂಕ ಮನದಲ್ಲಿದೆ ಎಂದಾತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News