ಧೋನಿ ತಂಡಕ್ಕೆ ವಾಪಸಾಗಲು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ಅಗತ್ಯ: ಬಿಸಿಸಿಐ

Update: 2020-03-09 18:11 GMT

ರಾಜ್‌ಕೋಟ್, ಮಾ 9: ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರು ಸೇರಿದಂತೆ ಇಬ್ಬರು ಹೊಸ ಸದಸ್ಯರನ್ನು ಸೇರಿಸುವುದರಿಂದ ಎಂಎಸ್ ಧೋನಿ ಕುರಿತು ಸಮಿತಿಯ ನಿಲುವು ಬದಲಾಗಿಲ್ಲ, ಅವರನ್ನು ಟ್ವೆಂಟಿ-20 ವಿಶ್ವಕಪ್ ತಂಡದ ಆಯ್ಕೆ ವೇಳೆ ಪರಿಗಣಿಸಬೇಕಾದರೆ ಮುಂಬರುವ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಮಾರ್ಚ್ 12 ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಸುನಿಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ರವಿವಾರ ಮೊದಲ ಬಾರಿಗೆ ಅಹ್ಮದಾಬಾದ್‌ನಲ್ಲಿ ಸಭೆ ಸೇರಿತು.

ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಶಿಖರ್ ಧವನ್ ಫಿಟ್‌ನೆಸ್ ಸಮಸ್ಯೆಯಿಂದ ಪಾರಾಗಿರುವ ಹಿನ್ನೆಲೆಯಲ್ಲಿ ಮತ್ತೆ ತಂಡಕ್ಕೆ ಕಾಲಿಟ್ಟಿದ್ದಾರೆ.

 ಧೋನಿ ತಂಡದಲ್ಲಿಲ್ಲ. ಆದರೆ ಆಯ್ಕೆಗೆ ಪರಿಗಣಿಸಬೇಕಾದರೆ ಅವರು ಮೊದಲು ಆಡಬೇಕಾಗುತ್ತದೆ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಈ ಹಿಂದೆ ಈ ಮಾತನ್ನು ಹೇಳಿದ್ದರು. ಅದೇ ನಿಲುವನ್ನು ಅವರ ಉತ್ತರಾಧಿಕಾರಿ ಜೋಶಿ ಮುಂದುವರಿಸಲು ಬಯಸಿದ್ದಾರೆ.

 ಜುಲೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಟೀಮ್ ಇಂಡಿಯಾದ ಪರ ಒಂದೇ ಒಂದು ಪಂದ್ಯವನ್ನು ಆಡದಿರುವ ಧೋನಿ ಮಾರ್ಚ್ 29 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಐಪಿಎಲ್‌ನಲ್ಲಿ ಪುನರಾಗಮನವನ್ನು ಮಾಡಲಿದ್ದಾರೆ.

ಇದು ಬಹಳ ಸರಳವಾದ ಆಯ್ಕೆ ಸಭೆ ಮತ್ತು ಧೋನಿ ಈ ಬಾರಿ ದಕ್ಷಿಣ ಆಫ್ರಿಕಾ ಲೆಕ್ಕಾಚಾರದಲ್ಲಿಲ್ಲದ ಕಾರಣ, ಅವರ ಭವಿಷ್ಯದ ಬಗ್ಗೆ ಯಾವುದೇ ಔಪಚಾರಿಕ ಮಾತುಕತೆ ನಡೆದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧೋನಿ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದರೆ ಮಾತ್ರ ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ. ಐಪಿಎಲ್‌ನಲ್ಲಿ ಅವರೊಂದಿಗೆ ಹಲವು ಮಂದಿ ಹಿರಿಯರು ಮತ್ತು ಯುವ ಆಟಗಾರರು ಆಡಲಿದ್ದಾರೆ. ಅವರು ಉತ್ತಮವಾಗಿ ಆಡಿದರೆ ಅವರನ್ನು ಸಹ ಪರಿಗಣಿಸಬೇಕಾಗಿದೆ.ಆದರೆ ನೀವು ಕೆಲವು ಆಶ್ಚರ್ಯಕರ ಸೇರ್ಪಡೆಗಳನ್ನು ನೋಡಬಹುದು ಅವರು ಹೇಳಿದರು.

ಟ್ವೆಂಟಿ-20 ವಿಶ್ವಕಪ್‌ನ್ನು ಅಕ್ಟೋಬರ್-ನವಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ಆಡಲಾಗುವುದು.

ಐಪಿಎಲ್‌ನಲ್ಲಿ ಆಟಗಾರರು ನೀಡುವ ಪ್ರದರ್ಶನವನ್ನು ಗಮನಿಸಲಾಗುತ್ತದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದವರು ಮೆಗಾ ಈವೆಂಟ್‌ಗೆಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿನ ಸಾಧನೆ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ನೆರವಾಗಲಿದೆ. ಮುಖ್ಯ ಕೋಚ್ ರವಿಶಾಸ್ತ್ರಿ ಕೂಡಾ ಧೋನಿ ಐಪಿಎಲ್ ನಂತರ ತಂಡಕ್ಕೆ ಮರಳಬಹುದೆಂದು ಸುಳಿವು ನೀಡಿದ್ದಾರೆ. ಆದರೆ ಏಳು ತಿಂಗಳಿಗಿಂತ ಹೆಚ್ಚು ಕಾಲ ಅವರು ಆಟವನ್ನು ಆಡದ ಕಾರಣ ಅವರ ಭವಿಷ್ಯವು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಧೋನಿ ಉತ್ತರಾಧಿಕಾರಿ ರಿಷಭ್ ಪಂತ್ ಅವರು ಇನ್ನೂ ತನ್ನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಸಾಬೀತುಪಡಿಸುವಲ್ಲಿ ಎಡವಿದ್ದಾರೆ. ಇದೀಗ ಲೋಕೇಶ್ ರಾಹುಲ್ ಅವರು ತಂಡದ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದರೂ, ಅವರು ತಂಡದ ಪೂರ್ಣಾವಧಿ ವಿಕೆಟ್ ಕೀಪರ್ ಆಗಿ ಬೆಳೆದಿಲ್ಲ. ಈ ಕಾರಣದಿಂದಾಗಿ ಧೋನಿಯ ಪುನರಾಗಮನವನ್ನು ತಳ್ಳಿಹಾಕುವಂತಿಲ್ಲ. ಮಾರ್ಚ್ 29ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ನಾಯಕರಾಗಿ ಮುನ್ನಡೆಸುವುದನ್ನು ಅವರ ಅಸಂಖ್ಯಾತ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News