ಕೊಯಂಬತ್ತೂರು: ಹಿಂದು ಮುನ್ನಣಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆತ
ತಿರುವನಂತಪುರಂ, ಮಾ.10: ಕೊಯಂಬತ್ತೂರಿನಲ್ಲಿರುವ ಹಿಂದು ಮುನ್ನಣಿ ಕಚೇರಿಯ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಬೆಳಿಗ್ಗೆ ಕಚೇರಿಯ ಬಾಗಿಲು ತೆಗೆದಾಗ ಕಚೇರಿಯೊಳಗೆ ಬಾಟಲಿಯ ಚೂರುಗಳು ಮತ್ತು ಪೆಟ್ರೋಲ್ ಬಾಂಬ್ ನಲ್ಲಿ ಬಳಸಲಾಗುವ ಕಚ್ಛಾವಸ್ತುಗಳ ತುಂಡು ಪತ್ತೆಯಾಗಿದೆ. ತಕ್ಷಣ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸಮೀಪದಲ್ಲಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ.
ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪುರಾವೆಗಳನ್ನು ಕಲೆ ಹಾಕಿದ್ದಾರೆ ಎಂದು ಡಿಸಿಪಿ ಬಾಲಾಜಿ ಸುವರ್ಣನ್ ಹೇಳಿದ್ದಾರೆ. ಈ ಮಧ್ಯೆ, ಗಣಪತಿ ನಗರದಲ್ಲಿರುವ ಮಸೀದಿಯ ಮೇಲೆ ಮಾರ್ಚ್ 6ರಂದು ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಮಂಗಳವಾರ ಬೆಳಿಗ್ಗೆ ವಾಹನ ತಪಾಸಣೆ ನಡೆಸುವ ಸಂದರ್ಭ ಬೈಕ್ ನಲ್ಲಿ ಬಂದ ಇವರಿಬ್ಬರು ಪೊಲೀಸರನ್ನು ಕಂಡೊಡನೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾರ್ಚ್ 5ರಂದು ನಡೆದಿದ್ದ ಪೌರತ್ವ ಕಾಯ್ದೆ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಹಿಂದು ಮುನ್ನಾನಿ ಜಿಲ್ಲಾ ಕಾರ್ಯದರ್ಶಿ ಮದುಕ್ಕರೈ ಆನಂದ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ ಮಸೀದಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.