ಗೃಹ ಬಂಧನದಲ್ಲೇ ಹುಟ್ಟುಹಬ್ಬ ಆಚರಿಸಿದ ಒಮರ್ ಅಬ್ದುಲ್ಲಾ

Update: 2020-03-10 16:30 GMT

 ಶ್ರೀನಗರ, ಮಾ.10: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ 50ನೇ ವರ್ಷಕ್ಕೆ ಕಾಲಿರಿಸಿದ್ದು ಕುಟುಂಬ ಸದಸ್ಯರ ಸಹಿತ ಹಲವು ಪ್ರಮುಖರು ಶುಭಾಶಯ ಸಲ್ಲಿಸಿದ್ದಾರೆ.

ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಕಳೆದ 7 ತಿಂಗಳಿನಿಂದ ಶ್ರೀನಗರದ ಹರಿನಿವಾಸದಲ್ಲಿ ಗೃಹಬಂಧನದಲ್ಲಿರುವ ಒಮರ್ ಅಬ್ದುಲ್ಲಾರನ್ನು ತಾಯಿ, ಸಹೋದರಿ ಹಾಗೂ ಕುಟುಂಬದ ಇತರ ಸದಸ್ಯರು ಭೇಟಿಯಾದರು. ಆದರೆ ಅವರ ತಂದೆ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕೂಡಾ ಗೃಹಬಂಧನದಲ್ಲಿರುವ ಕಾರಣ ಮಗನನ್ನು ಭೇಟಿಯಾಗಿ ಶುಭಾಷಯ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಒಮರ್ ಅಬ್ದುಲ್ಲಾರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿರುವ ಅವರ ಸಹೋದರಿ ಸಾರಾ ಅಬ್ದುಲ್ಲಾ ಪೈಲಟ್ ಶುಭಾಶಯ ಕೋರಿದ್ದಾರೆ. ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ವಹಿಸುತ್ತಿದ್ದು, ಇದರ ಮೂಲ ಮಾಲಕರು ಬಿಡುಗಡೆಗೊಂಡ ತಕ್ಷಣ ಅವರಿಗೆ ವಹಿಸಿಕೊಡುತ್ತೇನೆ ಎಂದು ಸಾರಾ ಟ್ವೀಟ್ ಮಾಡಿದ್ದಾರೆ. ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಮತ್ತಿತರರು ಒಮರ್ ಅಬ್ದುಲ್ಲಾಗೆ ಜನ್ಮದಿನದ ಶುಭಾಶಯ ಸಲ್ಲಿಸಿದ್ದಾರೆ. 28ನೇ ವಯಸ್ಸಿನಲ್ಲಿ ಸಂಸತ್ ಸದಸ್ಯನಾದ ಒಮರ್ ಅಬ್ದುಲ್ಲಾ, 2000ನೇ ಇಸವಿಯಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ವಿದೇಶ ವ್ಯವಹಾರ ಇಲಾಖೆಯ ಉಪಸಚಿವರಾಗಿ ನೇಮಕಗೊಂಡಿದ್ದರು. 2009ರಿಂದ 2014ರವರೆಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News