×
Ad

ಝಿಂಬಾಬ್ವೆ ವಿರುದ್ಧ ಬಾಂಗ್ಲಾ ದೇಶಕ್ಕೆ ಭರ್ಜರಿ ಜಯ

Update: 2020-03-10 23:43 IST

ಢಾಕಾ, ಮಾ.10: ಸೌಮ್ಯ ಸರ್ಕಾರ್ ಹಾಗೂ ಲಿಟನ್ ದಾಸ್ ಸಿಡಿಸಿರುವ ಅರ್ಧಶತಕಗಳ ನೆರವಿನಿಂದ ಸೋಮವಾರ ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 48 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಸೌಮ್ಯ ಸರ್ಕಾರ್ ವೃತ್ತಿಜೀವನದ ಎರಡನೇ ಅರ್ಧಶತಕದೊಂದಿಗೆ ಜೀವನಶ್ರೇಷ್ಠ ಇನಿಂಗ್ಸ್(62, 32 ಎಸೆತ, 4 ಬೌಂಡರಿ, 5 ಸಿಕ್ಸರ್)ಆಡಿದರೆ, ಫಾರ್ಮ್‌ನಲ್ಲಿರುವ ಲಿಟನ್ ದಾಸ್ 39 ಎಸೆತಗಳಲ್ಲಿ 59 ರನ್(5 ಬೌಂಡರಿ, 3 ಸಿಕ್ಸರ್) ಗಳಿಸಿ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಲು ನೆರವಾದರು.

ಗೆಲ್ಲಲು ಕಠಿಣ ಗುರಿ ಪಡೆದ ಪ್ರವಾಸಿ ಝಿಂಬಾಬ್ವೆ ತಂಡ 19 ಓವರ್‌ಗಳಲ್ಲಿ 152 ರನ್ ಗಳಿಸುವುದರೊಳಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಬಾಂಗ್ಲಾ ವಿರುದ್ಧ ಟ್ವೆಂಟಿ-20ಯಲ್ಲಿ ಭಾರೀ ಅಂತರದಿಂದ ಸೋಲನುಭವಿಸಿತು.

ಬಾಂಗ್ಲಾದೇಶದ ಪರ ಲೆಗ್-ಸ್ಪಿನ್ನರ್ ಅಮಿನುಲ್ ಇಸ್ಲಾಂ(3-34) ಹಾಗೂ ಮುಸ್ತಫಿಝುರ್ರಹ್ಮಾನ್(3-32)ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಬ್ಯಾಟಿಂಗ್ ಪವರ್‌ಪ್ಲೇ ವೇಳೆಗೆ 37 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿರುವ ಝಿಂಬಾಬ್ವೆ ಪರ ಟಿನಾಶೆ ಕಮುನ್‌ಹುಕಾಮ್‌ಮ್ವೆ(28)ಸರ್ವಾಧಿಕ ರನ್ ಗಳಿಸಿದರು. ಝಿಂಬಾಬ್ವೆ ನಾಯಕ ಸಿಯಾನ್ ವಿಲಿಯಮ್ಸ್(20)ವಿಕೆಟನ್ನು ಪಡೆದ ಅಮಿನುಲ್ ಇಸ್ಲಾಂ ಝಿಂಬಾಬ್ವೆ ಬ್ಯಾಟಿಂಗ್ ಬೆನ್ನಲುಬು ಮುರಿದರು. ರಿಚ್ಮಂಡ್ ಮುಟುಂಬಮಿ ಹಾಗೂ ಡೊನಾಲ್ಡ್ ಟಿರಿಪಾನೊ ತಲಾ 20 ರನ್ ಕೊಡುಗೆ ನೀಡಿದರು. ಕಾರ್ಲ್ ಮುಂಬಾ ಇನಿಂಗ್ಸ್ ಅಂತ್ಯದಲ್ಲಿ 16 ಎಸೆತಗಳಲ್ಲಿ 25 ರನ್ ಗಳಿಸಿ ತಂಡದ ಸೋಲಿನ ಅಂತರ ತಗ್ಗಿಸಲು ಯತ್ನಿಸಿದರು.

ಬಾಂಗ್ಲಾದೇಶ 200/3:

ಇದಕ್ಕೂ ಮೊದಲು ತಮೀಮ್ ಇಕ್ಬಾಲ್(41,33 ಎಸೆತ)ಅವರೊಂದಿಗೆ ಮೊದಲ ವಿಕೆಟ್‌ಗೆ 92 ರನ್ ಸೇರಿಸಿದ ಲಿಟನ್ ದಾಸ್ ಬಾಂಗ್ಲಾದೇಶ ಬೃಹತ್ ಮೊತ್ತ ಗಳಿಸಲು ಭದ್ರಬುನಾದಿ ಹಾಕಿಕೊಟ್ಟರು.

ಸೌಮ್ಯ ಸರ್ಕಾರ್ ಭರ್ಜರಿ ಬ್ಯಾಟಿಂಗ್(ಔಟಾಗದೆ 62, 32 ಎಸೆತ, 4 ಬೌಂಡರಿ, 5 ಸಿಕ್ಸರ್) ಮೂಲಕ ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧ ಟ್ವೆಂಟಿ-20ಯಲ್ಲಿ ಗರಿಷ್ಠ ಸ್ಕೋರ್ ಗಳಿಸಲು ನೆರವಾದರು. ಬಾಂಗ್ಲಾ ಈ ಹಿಂದೆ ಝಿಂಬಾಬ್ವೆ ವಿರುದ್ಧ 175 ರನ್ ಗಳಿಸಿತ್ತು. ಇನಿಂಗ್ಸ್‌ನ ಕೊನೆಯ ಓವರ್ ಬೌಲಿಂಗ್ ಮಾಡಿದ ಕ್ರಿಸ್ ಮಪೊಫು ಅವರು ಎಸೆದಿರುವ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಸೌಮ್ಯ ಸರ್ಕಾರ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

‘‘ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನೋಡಲು ಖುಷಿಯಾಗುತ್ತದೆ. ತಮೀಮ್ ಹಾಗೂ ಲಿಟನ್ ನಾವು ಬಯಸಿದ ಆರಂಭವನ್ನು ನೀಡಿದರು. ಸೌಮ್ಯ ಉತ್ತಮ ಅಂತ್ಯ ಹಾಡಿದರು’’ ಎಂದು ಬಾಂಗ್ಲಾದೇಶದ ನಾಯಕ ಮಹ್ಮೂದುಲ್ಲಾ ಹೇಳಿದ್ದಾರೆ.

ಔಟಾಗದೆ 62 ರನ್ ಗಳಿಸಿದ ಸೌಮ್ಯ ಸರ್ಕಾರ್ ಪಂದ್ಯಶ್ರೇಷ್ಠ ಗೌರವ ಪಡೆದರು. ಬುಧವಾರ ಎರಡನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News