ಅಪಹರಣಕಾರನೆಂಬ ಶಂಕೆ: ಪ್ರವಾಸಕ್ಕೆ ತೆರಳಿದ್ದ ಯುವಕನ ಥಳಿಸಿ ಹತ್ಯೆ

Update: 2020-03-11 14:02 GMT

ಶಿಲಾಂಗ್, ಮಾ.11: ಪ್ರವಾಸಕ್ಕೆ ತೆರಳಿದ್ದ 9 ಯುವಕರ ಮೇಲೆ ಅಪಹರಣಕಾರರೆಂಬ ಶಂಕೆಯಲ್ಲಿ ನಡೆದ ಗುಂಪುದಾಳಿಯಲ್ಲಿ ಯುವಕನೊಬ್ಬ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು , ಪ್ರಕರಣಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವುದಾಗಿ ಮೇಘಾಲಯದ ಪೊಲೀಸರು ಹೇಳಿದ್ದಾರೆ.

 ಸಿಂಟಂಗ್ ಎಂಬ ಗ್ರಾಮಕ್ಕೆ ರವಿವಾರ ಪ್ರವಾಸಕ್ಕೆ ತೆರಳಿದ್ದ 9 ಯುವಕರ ತಂಡ ರಾತ್ರಿ ವಾಪಸಾಗುತ್ತಿದ್ದಾಗ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಮ್ವಾಕಿನ್ರು ಪ್ರದೇಶದಲ್ಲಿ ಅವರನ್ನು ತಡೆದ ಗುಂಪು ಹಲ್ಲೆ ನಡೆಸಿದೆ. ಇದರಲ್ಲಿ ಆರು ಯುವಕರು ಸಮೀಪದ ಅರಣ್ಯದೊಳಗೆ ಓಡಿ ತಪ್ಪಿಸಿಕೊಂಡಿದ್ದಾರೆ. ಸಿಕ್ಕಿಬಿದ್ದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಗಂಭೀರ ಗಾಯಗೊಂಡಿದ್ದ 24 ವರ್ಷದ ಮೆಕ್‌ಮಿಲನ್ ಖರ್ಶಂಡಿ ಎಂಬಾತ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಸಹಾಯಕ ಐಜಿಪಿ ಗ್ಯಾಬ್ರಿಯೆಲ್ ಲಂಗ್ರಾಯ್ ಹೇಳಿದ್ದಾರೆ.

ಈ ಯುವಕರು ಪಿಕ್ನಿಕ್ ಸ್ಥಳದಲ್ಲಿ ಅಡ್ಡಾಡುತ್ತಿದುದನ್ನು ತಪ್ಪಾಗಿ ತಿಳಿದ ಕೆಲವರು, ಮಕ್ಕಳ ಅಪಹರಣಕಾರರು ಸಂಶಯಾಸ್ಪದವಾಗಿ ಅಡ್ಡಾಡುತ್ತಿದ್ದಾರೆ ಎಂದು ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಪ್ರವಾಸಕ ದಿಂದ ವಾಪಸಾಗುತ್ತಿದ್ದಾಗ ರಾತ್ರಿಯಾಗಿದ್ದರಿಂದ ದಾರಿ ತಪ್ಪಿ ಅಲೆದಾಡುವಂತಾಗಿದೆ. ಆಗ ಗ್ರಾಮಸ್ಥರು ನಮ್ಮ ವಾಹನವನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಗಾಯಗೊಂಡಿರುವ ಯುವಕ ಮಾಹಿತಿ ನೀಡಿದ್ದಾನೆ. ಹಲ್ಲೆ ನಡೆಯುತ್ತಿರುವ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು 24 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಉದ್ರಿಕ್ತ ಗುಂಪನ್ನು ಸಮಾಧಾನಗೊಳಿಸಲು ನಡೆಸಿದ ಪ್ರಯತ್ನ ವಿಫಲವಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಹಲ್ಲೆಗೊಳಗಾದ ಯುವಕರ ಮನೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಕ್ಷಮೆ ಯಾಚಿಸಿದ್ದೇವೆ ಎಂದು ಸಿಂಟಂಗ್ ಗ್ರಾಮದ ಮುಖಂಡ ಆರ್ ಪಾಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News