ತಾಹಿರ್ ಹುಸೈನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಈ.ಡಿ.

Update: 2020-03-11 15:10 GMT

ಹೊಸದಿಲ್ಲಿ, ಮಾ. 11: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಆಪ್‌ನ ಅಮಾನತುಗೊಂಡ ಕೌನ್ಸಿಲರ್ ತಾಹಿರ್ ಹುಸೈನ್ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಹಣ ಅಕ್ರಮ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದೆ.

ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಗುಪ್ತಚರ ಸಂಸ್ಥೆಯ ಅಧಿಕಾರಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅವರ ಕುಟುಂಬ ಎಫ್‌ಐಆರ್ ದಾಖಲಿಸಿದ ಬಳಿಕ ಕಳೆದ ವಾರ ಹುಸೈನನ್ನು ಬಂಧಿಸಲಾಗಿತ್ತು.

ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ತನಿಖೆಗೆ ಸಂಬಂಧಿಸಿ ಈಗಾಗಲೇ ಪರಿಶೀಲನೆಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಹುಸೈನ್ ನಂಟು ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇದಲ್ಲದೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಪ್ರಕರಣ ದಾಖಲಿಸಿದೆ. 53 ಜನರ ಸಾವನ್ನಪ್ಪಲು ಹಾಗೂ 400ಕ್ಕೂ ಅಧಿಕ ಜನರು ಗಾಯಗೊಳ್ಳಲು ಕಾರಣವಾದ ಈಶಾನ್ಯ ದಿಲ್ಲಿಯ ಹಿಂಸಾಚಾರಕ್ಕೆ ಸಂಬಂಧಿಸಿ ಗಲಭೆ ಹಾಗೂ ಕ್ರಿಮಿನಲ್ ಸಂಚು ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯ ಮುಹಮ್ಮದ್ ದಾನಿಶ್‌ನನ್ನು ದಿಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದರು.

ಶಾಹೀನ್‌ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಾಗೂ ಗಲಭೆಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿ ಮುಹಮ್ಮದ್ ದಾನಿಶ್ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 33 ವರ್ಷದ ದಾನಿಶ್‌ನನ್ನು ಪೂರ್ವ ದಿಲ್ಲಿಯ ತ್ರಿಲೋಕಪುರಿಯಲ್ಲಿರುವ ಮನೆಯಿಂದ ರವಿವಾರ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಸೋಮವಾರ ಆತನ ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ದಾನಿಶ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಗುಪ್ತಚರ ಪ್ರತಿರೋಧ ಘಟಕದ ಒಂದು ಭಾಗವಾಗಿದ್ದ ಎಂದು ದಿಲ್ಲಿ ಪೊಲೀಸ್‌ನ ವಿಶೇಷ ಘಟಕದ ಅಧಿಕಾರಿ ಆರೋಪಿಸಿದ್ದಾರೆ.

ಈ ನಡುವೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಈಶಾನ್ಯ ದಿಲ್ಲಿ ಕೋಮ ಹಿಂಸಾಚಾರದೊಂದಿಗೆ ಸಂಘಟನೆಗೆ ನಂಟು ಇದೆ ಎಂಬ ಆರೋಪ ಆಧಾರ ರಹಿತ ಎಂದು ಹೇಳಿದೆ. ಅಲ್ಲದೆ, ಸಂಘಟನೆಯನ್ನು ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಅನಗತ್ಯವಾಗಿ ಎಳೆದು ತರುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News