×
Ad

ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಕೆ ನಿಷೇಧಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2020-03-11 22:03 IST
ಫೈಲ್ ಚಿತ್ರ 

ಶ್ರೀನಗರ, ಮಾ.11: ಕಾಶ್ಮೀರದಲ್ಲಿ ಗುಂಪಿನ ನಿಯಂತ್ರಣಕ್ಕೆ ಪೆಲೆಟ್ ಗನ್ ಬಳಸುವುದಕ್ಕೆ ನಿಷೇಧ ವಿಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಮ್ಮು ಕಾಶ್ಮೀರ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

 ಅನಿಯಂತ್ರಿತ ಜನಸಮೂಹ ನಡೆಸುವ ಹಿಂಸಾಚಾರ ಇರುವವರೆಗೂ ಪೆಲೆಟ್ ಗನ್ ಬಳಕೆ ಅನಿವಾರ್ಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಸಂಬಂಧಿತ ಸಮಯದಲ್ಲಿ ಅಥವಾ ಆ ಪರಿಸ್ಥಿತಿಯಲ್ಲಿ , ಸ್ಥಳದಲ್ಲಿ ಯಾವ ರೀತಿಯ ಸೇನಾಬಲ ಬಳಸಬೇಕು ಎಂಬುದನ್ನು ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಕಾರ್ಯದ ಹೊಣೆ ಹೊತ್ತುಕೊಂಡ ವ್ಯಕ್ತಿ ನಿರ್ಧರಿಸಬೇಕು ಎಂದು ತಿಳಿಸಿರುವ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿದೆ.

ರಾಜ್ಯದಲ್ಲಿ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದ ಯುವಜನರ ಪರಿಸ್ಥಿತಿಯನ್ನು ಗಮನಿಸಿದ ಜಮ್ಮು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್, ಪೆಲೆಟ್ ಗನ್ ಬಳಕೆಗೆ ನಿಷೇಧ ಕೋರಿ 2016ರ ಜುಲೈಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ರಾಜ್ಯದಲ್ಲಿ ಪೆಲೆಟ್ ಗನ್‌ಗಳ ಬಳಕೆಯನ್ನು ಸಂಪೂರ್ಣ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ಕೇಂದ್ರ ಸರಕಾರ, ಪೆಲೆಟ್ ಗನ್‌ಗೆ ಪರ್ಯಾಯ ಆಯುಧದ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಹೇಳಿತ್ತು.

2010ರಿಂದ ರಾಜ್ಯದಲ್ಲಿ ಬಳಸುತ್ತಿರುವ ಪೆಲೆಟ್ ಗನ್‌ಗಳು ದಂಗೆ ನಿಯಂತ್ರಣಕ್ಕೆ ಸೂಕ್ತ ಆಯುಧವಾಗಿದೆ . ಒಂದು ವೇಳೆ ಇವನ್ನು ಹಿಂಪಡೆದರೆ ಆಗ ಹಿಂಸಾಚಾರದ ಸಂದರ್ಭದಲ್ಲಿ ರೈಫಲ್‌ನಿಂದ ಗುಂಡು ಹಾರಿಸುವ ಅನಿವಾರ್ಯತೆ ಬರುತ್ತದೆ. ಆಗ ಹೆಚ್ಚಿನ ಪ್ರಾಣಹಾನಿ ಸಂಭವಿಸಬಹುದು ಎಂದು ಸಿಆರ್‌ಪಿಎಫ್ ಹೇಳಿಕೆ ನೀಡಿತ್ತು. ಪೆಲೆಟ್ ಗನ್‌ಗೆ ಪರ್ಯಾಯ ಆಯುಧದ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿಯನ್ನು ಕೇಂದ್ರ ಗೃಹ ಇಲಾಖೆ ಈಗಾಗಲೇ ರಚಿಸಿದೆ. ಸಮಿತಿ ಇನ್ನೂ ವರದಿ ನೀಡಿಲ್ಲ. ಸಮಿತಿಯ ವರದಿಯ ಬಗ್ಗೆ ಸರಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಅದುವರೆಗೆ ಪೆಲೆಟ್ ಗನ್ ಬಳಕೆಗೆ ನಿಷೇಧ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News