7 ಮಂದಿ ಕಾಂಗ್ರೆಸ್ ಸಂಸದರ ಅಮಾನತು ಆದೇಶ ರದ್ದು
ಹೊಸದಿಲ್ಲಿ,ಮಾ.11: ಕಳೆದ ವಾರ ಲೋಕಸಭೆಯಲ್ಲಿ ಗದ್ದಲವೆಬ್ಬಿಸಿ, ಸದನದ ಕಲಾಪಗಳಿಗೆ ಅಡ್ಡಿಪಡಿಸಿದ್ದ ಏಳು ಮಂದಿ ಕಾಂಗ್ರೆಸ್ ಸದಸ್ಯರ ಅಮಾನತು ಆದೇಶವನ್ನು ಬುಧವಾರ ರದ್ದುಪಡಿಸಲಾಗಿದೆ.
ಮಾರ್ಚ್ 5ರಂದು ಸದನದ ಕಲಾಪದ ವೇಳೆ ದುರ್ವರ್ತನೆ ತೋರಿದ್ದ ಆರೋಪದಲ್ಲಿ ಈ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಜೆಟ್ ಅಧಿವೇಶನದ ಉಳಿದ ಅವಧಿ ಯವರೆಗೆ ಅಮಾನತುಗೊಳಿಸಿದ್ದರು.
ಗೌರವ್ ಗೊಗೊಯಿ, ಟಿ.ಎನ್. ಪ್ರತಾಪನ್, ಡೀನ್ ಕುರಿಯಾಕೋಸ್, ಮಾನಿಕಂ ಠಾಗೋರ್, ಬೆನ್ನಿ ಬೆಹನಾನ್ ಹಾಗೂ ಗುರುಜಿತ್ ಸಿಂಗ್ ಅಹುಜಾ ಅಮಾನತುಗೊಳಿಸಲ್ಪಟ್ಟಿದ್ದ ಲೋಕಸಭಾ ಸದಸ್ಯರು ಇಂದು ಬೆಳಗ್ಗೆ ಲೋಕಸಭಾ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ಪ್ರತಿಪಕ್ಷ ಸದಸ್ಯರು ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗುತ್ತಾ ಏಳು ಮಂದಿ ಸಂಸದರ ಅಮಾನತು ಆದೇಶವನ್ನು ಹಿಂತೆಗೆಯಬೇಕೆಂದು ಆಗ್ರಹಿಸಿದರು. ವಿಪಕ್ಷ ಸಂಸದರ ಪ್ರತಿಭಟನೆಯಿಂದಾಗಿ ಕಲಾಪ ನಡೆಸುವುದೇ ಅಸಾಧ್ಯವಾದ್ದರಿಂದ ಸದನವನ್ನು 12.30ರವರೆಗೆ ಮುಂದೂಡಲಾಯಿತು. ಆನಂತರ ಅದನ್ನು 1.30ರವರೆಗೆ ವಿಸ್ತರಿಸಲಾಯಿತು.
1:30ರ ವೇಳೆಗೆ ಲೋಕಸಭಾ ಕಲಾಪ ಪುನಾರಂಭಗೊಂಡಾಗ ಆಗಮಿಸಿದ ಸ್ಪೀಕರ್ ಓಂ ಬಿರ್ಲಾರನ್ನು ಹಲವಾರು ಪ್ರತಿಪಕ್ಷ ಸದಸ್ಯರು ಸ್ವಾಗತಿಸಿದರು. “ನೀವು ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಳ್ಳದೆ ಇರುವುದರದ ಸದನಕ್ಕೆ ಅನಾಥಪ್ರಜ್ಞೆ ಕಾಡುತ್ತಿತ್ತು” ಎಂದು ಟಿಎಂಸಿ ಸಂಸದ ಸೌಗತ್ ರಾಯ್ ಹೇಳಿದರು. ನಮ್ಮ ಹಕ್ಕುಗಳನ್ನು ರಕ್ಷಿಸಲು ಯಾರೂ ಇಲ್ಲ ಎಂದು ಅವರು ಕಟಕಿಯಾಡಿದರು. ಏಳು ಮಂದಿ ಕಾಂಗ್ರೆಸಿಗರ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಹಲವಾರು ಸಂಸದರು ಆಗ್ರಹಿಸಿದರು. ಆನಂತರ ಸ್ಪೀಕರ್ ಅವರು ಎಲ್ಲಾ ಏಳು ಮಂದಿ ಸಂಸದರ ಅಮಾನತು ಆದೇಶವನ್ನು ರದ್ದುಪಡಿಸಿ, ಆದೇಶ ಹೊರಡಿಸಿದರು.
ಸದನ ಕಲಾಪ ಆರಂಭಕ್ಕೆ ಮುನ್ನ ಓಂ ಬಿರ್ಲಾ ಸರ್ವ ಪಕ್ಷಸಭೆ ಕರೆದು ಬಿರ್ಲಾ ಅವರು ಸರ್ವಪಕ್ಷ ಸಭೆ ಕರೆದು ಸಮಾಲೋಚನೆ ನಡೆಸಿದ್ದರು.