2019 ರಲ್ಲಿ ಘೋಷಿಸಿದ್ದ 1.84 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಬಗ್ಗೆ ಮಾಹಿತಿ ನೀಡದೆ ನುಣುಚಿಕೊಂಡ ಸರಕಾರ
ಹೊಸದಿಲ್ಲಿ, ಮಾ. 11: ನರೇಂದ್ರ ಮೋದಿ ಸರಕಾರ 2020 ಎಪ್ರಿಲ್ ಒಳಗಡೆ 639 ಕೋಟಿ ರೂಪಾಯಿ ನೀಡಿ 1.86 ಲಕ್ಷ ಗುಂಡು ನಿರೋಧಕ ಜ್ಯಾಕೆಟ್ ಖರೀದಿಸಲಿದೆ ಎಂದು ಸುಮಾರು ಒಂದು ವರ್ಷಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಆದರೆ, ಲೋಕಸಭೆಯಲ್ಲಿ ಬುಧವಾರ ಶಸಸ್ತ್ರ ಪಡೆಯ ಯೋಧರಿಗೆ ಇಂತಹ ಜಾಕೆಟ್‌ಗಳ ಲಭ್ಯತೆಯ ಕುರಿತ ನಿಖರ ಪ್ರಶ್ನೆಗೆ ಉತ್ತರಿಸುವುದರಿಂದ ಕೇಂದ್ರ ಸರಕಾರ ನುಣುಚಿಕೊಂಡಿದೆ ಎಂದು Thewire.in ವರದಿ ಮಾಡಿದೆ.
2019 ಜುಲೈ 8ರಂದು ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೋತ್ತರ ಅವಧಿಯಲ್ಲಿ ರಾಜನಾಥ್ ಸಿಂಗ್, ಇಂತಹ ಜಾಕೆಟ್‌ಗಳ ಕೊರತೆ ತುಂಬಲು 2020 ಎಪ್ರಿಲ್ ಅಂತಿಮ ಗಡು ಎಂದು ಮಾಹಿತಿ ನೀಡಿದ್ದರು. ‘‘ಭಾರತದಲ್ಲಿ 2009ರಲ್ಲಿ 3,53,755 ಗುಂಡು ನಿರೋಧಕ ಜಾಕೆಟ್‌ಗಳ ಕೊರತೆ ಇತ್ತು. ಆದರೆ, ಈ ಜಾಕೆಟ್‌ಗಳನ್ನು ಹೊಂದಲು ದೀರ್ಘಾವಧಿಯಿಂದಲೂ ಸಾಧ್ಯವಾಗಿಲ್ಲ. 1.86, 138 ಗುಂಡು ನಿರೋಧಕ ಜಾಕೆಟ್‌ಗಳನ್ನು ಹೊಂದಲು ಪ್ರಸ್ತಾಪದ ಮನವಿಯನ್ನು 2016 ಎಪ್ರಿಲ್‌ನಲ್ಲಿ ನೀಡಲಾಗಿತ್ತು. 2018 ಎಪ್ರಿಲ್ 9ರಂದು ಈ ಸಂಬಂಧ ಭಾರತೀಯ ಖರೀದಿದಾರರಿಗೆ ಟೆಂಡರ್ ನೀಡಲಾಗಿತ್ತು’’
36 ತಿಂಗಳಲ್ಲಿ ಪೂರೈಕೆಯಾಗಲಿರುವ 1,86,138 ಗುಂಡು ನಿರೋಧಕ ಜಾಕೆಟ್‌ಗಳನ್ನು ಖರೀದಿಸುವ ಒಟ್ಟು ಗುತ್ತಿಗೆ ವೌಲ್ಯ 638,97 ಕೋಟಿ ರೂಪಾಯಿ ಹಾಗೂ ಇದು 2020 ಎಪ್ರಿಲ್ 8ರಂದು ಸಂಪೂರ್ಣಗೊಳ್ಳಲಿದೆ ಎಂದು ಸಿಂಗ್ ಹೇಳಿದ್ದರು. ದೇಶಿ ಉದ್ಯಮಿಗಳು ಸೇನೆಗೆ 1.86 ಲಕ್ಷ ಜಾಕೆಟ್‌ಗಳನ್ನು ಈಗಾಗಲೇ ಪೂರೈಕೆ ಮಾಡಿದ್ದಾರೆ. ಮುಂದಿನ ಪೂರೈಕೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಂದು ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ಸ್‌ನ ಉಪ ನಿರ್ದೇಶಕ ರಾಜೇಶ್ ಬಜಾಜ್ 2019 ಸೆಪ್ಟಂಬರ್‌ನಲ್ಲಿ ತಿಳಿಸಿದ್ದರು.
ಆದರೆ, ಇಂದು ಲೋಕಸಭೆಯಲ್ಲಿ ದೇಶದ ಸೇನಾ ಪಡೆಗೆ ಗುಂಡು ನಿರೋಧಕ ಜಾಕೆಟ್ ಲಭ್ಯತೆ ಕುರಿತ ಸದಸ್ಯ ಚಂದ್ರ ಪ್ರಕಾಶ್ ಜೋಷಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಧಿಸಲಾದ ಪ್ರಮಾಣಕ್ಕೆ ಅನುಗುಣವಾಗಿ ಗುಂಡು ನಿರೋಧಕ ಜಾಕೆಟ್ ಹೊಂದಲಾಗುವುದು ಹಾಗೂ ಕಾಲಕ್ಕನುಗುಣವಾಗಿ ನಿರ್ದಿಷ್ಟತೆ ಹಾಗೂ ಅಧಿಕಾರದಂತೆ ಯೋಧರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿ ನುಣುಚಿಕೊಂಡರು.