ದಿಲ್ಲಿ ಹಿಂಸಾಚಾರ ಪೂರ್ವ ನಿಯೋಜಿತ ಪಿತೂರಿ: ಮಾಣಿಕ್ ಸರ್ಕಾರ್

Update: 2020-03-11 17:22 GMT

ಅಗರ್ತಲಾ, ಮಾ. 11: ಈಶಾನ್ಯ ದಿಲ್ಲಿ ಹಿಂಸಾಚಾರ ‘ಪೂರ್ವ ನಿಯೋಜಿತ ಪಿತೂರಿ’ ಎಂದು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹೇಳಿದ್ದಾರೆ.

ಈಶಾನ್ಯ ದಿಲ್ಲಿ ಹಿಂಸಾಚಾರದಲ್ಲಿ ಸಂತ್ರಸ್ತರಿಗೆ ನಿಧಿ ಸಂಗ್ರಹ ಆರಂಭಿಸಿರುವ ಮಾಣಿಕ್ ಸರ್ಕಾರ್, ಗಲಭೆ ಸಂತ್ರಸ್ತರಿಗೆ ನೆರವು ನೀಡುವಂತೆ ಜನರಲ್ಲಿ ಕೋರಿದ್ದಾರೆ. ಅಲ್ಲದೆ, 53 ಜನರ ಸಾವಿಗೆ ಕಾರಣವಾದ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಆಡಳಿತದ ವಿಫಲತೆಯನ್ನು ಪ್ರಶ್ನಿಸಿದ್ದಾರೆ.

 ‘‘ದಿಲ್ಲಿಯ ಹೊರಗಿನಿಂದ ಗೂಂಡಾಗಳನ್ನು ಬಾಡಿಗೆಗೆ ಕರೆ ತರಲಾಗಿದೆ. ಅವರು ಅನೇಕ ಮನೆ ಹಾಗೂ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಇದು ಕೋಮು ದ್ವೇಷದ ಪೂರ್ವ ಯೋಜಿತ ಪಿತೂರಿ’’ ಎಂದು ಅವರು ಹೇಳಿದ್ದಾರೆ.

 ‘‘ಹಿಂಸಾಚಾರ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದೆ ಬರಬೇಕು’’ ಎಂದು ಅವರು ಆಗ್ರಹಿಸಿದರು. ಪ್ರಸ್ತುತ ರಾಜ್ಯದ ಪ್ರತಿಪಕ್ಷದ ನಾಯಕರಾಗಿರುವ ಸರ್ಕಾರ್, ಹಿಂಸಾಚಾರದ ಹಿಂದಿರುವ ಪಿತೂರಿಗಾರರ ವಿರುದ್ಧ ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಸಿಪಿಎಂ ಕಾರ್ಯಕರ್ತರು ಆಯೋಜಿಸಿರುವ ನಿಧಿ ಸಂಗ್ರಹ ಕಾರ್ಯಕ್ರಮ ಇನ್ನು ಕೆಲವು ದಿನಗಳ ಕಾಲ ರಾಜ್ಯಾದ್ಯಂತ ನಡೆಯಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News