ಶೀಘ್ರದಲ್ಲೇ ಮೊಬೈಲ್ ಡಾಟಾ ಬೆಲೆ 590 ರಿಂದ 5,000 ರೂ. ಗೆ ಏರಿಕೆ ?

Update: 2020-03-11 18:07 GMT

ಹೊಸದಿಲ್ಲಿ, ಮಾ. 11: ಜಗತ್ತಿನಲ್ಲೇ ಭಾರತದಲ್ಲಿ ಮೊಬೈಲ್ ಬಳಕೆದಾರರು ಅತಿ ಅಗ್ಗದ ದರದಲ್ಲಿ ಮೊಬೈಲ್ ಡಾಟಾ ಸೇವೆ ಆನಂದಿಸುತ್ತಿದ್ದರು. ಆದರೆ, ಇನ್ನು ಮುಂದೆ ಸಾಧ್ಯವಿಲ್ಲ. ಯಾಕೆಂದರೆ ಟೆಲಿಕಾಂ ಸೇವೆ ಪೂರೈಕೆ ಕಂಪೆನಿಗಳು ಕರೆ ಹಾಗೂ ಡಾಟಾ ದರ ಹೆಚ್ಚಿಸುವಂತೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾ ಯ್)ವನ್ನು ಆಗ್ರಹಿಸಿ ಪ್ರಸ್ತಾಪ ಸಲ್ಲಿಸಿದ್ದಾರೆ.

ಭಾರತದಲ್ಲಿ ಪ್ರಸ್ತುತ ಮೊಬೈಲ್ ಗ್ರಾಹಕರು 4 ಜಿ ಡಾಟಾವನ್ನು ಪ್ರತಿ ಜಿಬಿಗೆ ಅತಿ ಅಗ್ಗ ಅಂದರೆ 3.5 ರೂಪಾಯಿ ದರದಲ್ಲಿ ಪಡೆಯುತ್ತಿದ್ದಾರೆ. ಒಂದು ವೇಳೆ ಟೆಲಿಕಾಂ ಸೇವೆ ನಿರ್ವಾಹಕರು ಕನಿಷ್ಠ ದರ ನಿಗದಿಪಡಿಸಲು ಆಗ್ರಹಿಸಿದರೆ, ಮೊಬೈಲ್ ಇಂಟರ್‌ನೆಟ್ ದರ ಈಗಿರುವ ದರಕ್ಕಿಂತ 5ರಿಂದ 10 ಪಟ್ಟು ಏರಿಕೆಯಾಗಲಿದೆ. ಪ್ರತಿ ಜಿಬಿಗೆ ಕನಿಷ್ಠ 35 ರೂಪಾಯಿ ನಿಗದಿಪಡಿಸಬೇಕು ಎಂದು ಸಾಲದ ಹೊರೆಯಿಂದ ಬಳಲುತ್ತಿರುವ ವೋಡಾಫೋನ್ ಐಡಿಯಾ ಪ್ರಸ್ತಾಪ ಸಲ್ಲಿಸಿದೆ. ಕಡಿಮೆ ಡಾಟಾ ಬಳಕೆದಾರರಿಗೆ ಪ್ರತಿ ಜಿಬಿಗೆ 30 ರೂಪಾಯಿ ವಿಧಿಸಬೇಕು ಎಂದು ಭಾರ್ತಿ ಏರ್‌ಟೆಲ್ ಪ್ರಸ್ತಾಪ ಮುಂದಿಟ್ಟಿದೆ. ಪ್ರತಿ ಜಿಬಿಗೆ ಕ್ರಮೇಣ 20 ರೂಪಾಯಿ ವಿಧಿಸಬೇಕು ಎಂದು ರಿಲಾಯನ್ಸ್ ಜಿಯೊ ಬಯಸಿದೆ. ಮೊಬೈಲ್ ಕರೆ ಹಾಗೂ ಡಾಟಕ್ಕೆ ಕನಿಷ್ಠ ದರ ನಿಗದಿಗೆ ಬೆಂಬಲ ನೀಡುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್, ಟೆಲಿಕಾಂ ವಲಯದ ಸಾಲದ ಹೊರೆ ಹೆಚ್ಚಾಗುತ್ತಿರುವುದು ಹಾಗೂ ಅಸಮರ್ಥನೀಯ ಬೆಲೆ ಕಾರಣದಿಂದ ಬೇರೆ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ. 4ಜಿ ವೇಗದಲ್ಲಿ 2ಜಿಬಿ ಡಾಟಾ ನೀಡುವ 84 ದಿನಗಳ ವ್ಯಾಲಿಡಿಟಿ ಇರುವ 599 ರೂಪಾಯಿ ಯೋಜನೆಯಲ್ಲಿ ಪ್ರತಿ ಜಿಬಿ ಡಾಟಾಕ್ಕೆ ಅತಿ ಕಡಿಮೆ 3.5 ರೂಪಾಯಿ ದರ ವಿಧಿಸಲಾಗುತ್ತಿದೆ. ಪ್ರತಿ ಜಿಬಿಗೆ 20ರಿಂದ 35 ರೂಪಾಯಿ ದರ ವಿಧಿಸಬೇಕೆನ್ನುವ ಟೆಲಿಕಾಂನ ನಿರ್ವಾಹಕರ ಪ್ರಸ್ತಾಪವನ್ನು ಟ್ರಾಯ್ ಒಪ್ಪಿಕೊಂಡರೆ ಇದೇ ಯೋಜನೆಗೆ 3,360ರಿಂದ 5,880 ರೂಪಾಯಿ ದರ ನೀಡಬೇಕಾಗಬಹುದು. ಟೆಲಿಕಾಂ ಸಂಸ್ಥೆಗಳ ಆಗ್ರಹದ ಹಿನ್ನೆಲೆಯಲ್ಲಿ ಕರೆ ಹಾಗೂ ಡಾಟಾ ಸೇವೆಯ ಕನಿಷ್ಠ ದರ ನಿಗದಿಗೊಳಿಸಲು ಟ್ರಾಯ್ ಆಸಕ್ತ ಟೆಲಿಕಾಂ ಸೇವೆ ಪೂರೈಕೆದಾರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News