ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ ರದ್ದು

Update: 2020-03-12 16:00 GMT

ಧರ್ಮಶಾಲಾ, ಮಾ.12: ನಿರಂತರ ಮಳೆ ಸುರಿದ ಪರಿಣಾಮ ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಗುರುವಾರ ಇಲ್ಲಿ ನಡೆಯಬೇಕಾಗಿದ್ದ ಮೊದಲ ಏಕದಿನ ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ. ಹಿಮಾಚಲಪ್ರದೇಶ ಕ್ರಿಕೆಟ್ ಸ್ಟೇಡಿಯಂ(ಎಚ್‌ಪಿಸಿಎ)ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಆರು ತಿಂಗಳೊಳಗೆ ಎರಡನೇ ಬಾರಿ ಪಂದ್ಯವೊಂದು ರದ್ದಾಗಿದೆ. ಕಾಕತಾಳೀಯವೆಂಬಂತೆ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ರದ್ದಾಗಿದ್ದ ಪಂದ್ಯವೂ ಭಾರತ-ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯವಾಗಿತ್ತು.

ಉತ್ತರ ಪಾಕಿಸ್ತಾನ ಹಾಗೂ ಜಮ್ಮು-ಕಾಶ್ಮೀರದಲ್ಲಿನ ಹವಾಗುಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಹವಾಮಾನ ಇಲಾಖೆ ಗುರುವಾರ ಹಾಗೂ ಶುಕ್ರವಾರ ಧರ್ಮಶಾಲಾದಲ್ಲಿ ಮಳೆಸುರಿಯುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿತ್ತು. ಪಂದ್ಯದ ವೇಳೆ ಮಳೆಯಾಗದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಆಯೋಜಕರು ಇಂದ್ರನಾಗ್ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದರು.

ಬುಧವಾರ ಉಭಯ ತಂಡಗಳು ಅಭ್ಯಾಸ ಮುಗಿಸಿದ ಬಳಿಕ ಪರ್ವತ ನಗರಿ ಧರ್ಮಶಾಲಾದಲ್ಲಿ ಭಾರೀ ಮಳೆ ಸುರಿದಿತ್ತು. ಆಗ ಆಯೋಜಕರು ಇಡೀ ಪಿಚ್‌ಗೆ ಹೊದಿಕೆ ಹಾಸಿದ್ದರು. ಇಡೀ ರಾತ್ರಿ ಮಳೆ ಸುರಿದ ಕಾರಣ ಪಿಚ್ ಸಂಪೂರ್ಣ ಒದ್ದೆಯಾಗಿತ್ತು. ದಿನಪೂರ್ತಿ ಮೋಡಕವಿದ ವಾತಾವರಣವಿತ್ತು. ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಮಳೆ ಸುರಿದಿತ್ತು. ಹೀಗಾಗಿ ಟಾಸ್ ಚಿಮ್ಮುವ ಪ್ರಕ್ರಿಯೆ ವಿಳಂಬವಾಗಿತ್ತು. ಮಳೆ ಜೋರಾಗಿ ಸುರಿಯದಿದ್ದರೂ ಮೈದಾನದಲ್ಲಿ ನೀರು ನಿಂತಿತ್ತು. ಹೀಗಾಗಿ ಸಂಘಟಕರು ಮೂರು ಬಾರಿ ಸೂಪರ್-ಸೋಪರ್ಸ್ ಯಂತ್ರವನ್ನು ಬಳಸಿ ನೀರು ತೆಗೆಯಲು ಯತ್ನಿಸಿದರು. ಮೈದಾನದ ಸಿಬ್ಬಂದಿಗಳು ದಣಿವಿಲ್ಲದೆ ಪ್ರಯತ್ನ ನಡೆಸಿದರೂ ಮೈದಾನವನ್ನು ಪಂದ್ಯಕ್ಕೆ ಯೋಗ್ಯವಾಗಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. 20 ಓವರ್ ಪಂದ್ಯ ನಡೆಸಲು ಸಂಜೆ 6:30 ಕೊನೆಯ ಗಡುವಾಗಿತ್ತು. ಆನ್ ಫೀಲ್ಡ್ ಅಂಪೈರ್‌ಗಳು ಅಂತಿಮವಾಗಿ ಪಿಚ್‌ನ್ನು ಪರೀಕ್ಷಿಸಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.

ಕೊರೋನ ವೈರಸ್ ಭೀತಿ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯದ ಟಿಕೆಟ್ ಮಾರಾಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News