ದಿಲ್ಲಿ ಹಿಂಸಾಚಾರಕ್ಕೆ ಆರ್ಥಿಕ ನೆರವು ನೀಡಿದ ಆರೋಪ: ಇಬ್ಬರು ಪಿಎಫ್‌ಐ ಸದಸ್ಯರ ಬಂಧನ

Update: 2020-03-12 16:11 GMT

ಹೊಸದಿಲ್ಲಿ, ಮಾ.12: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಕೋಮು ಹಿಂಸಾಚಾರಕ್ಕೆ ಬೆಂಬಲ ಮತ್ತು ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಇಬ್ಬರು ಸದಸ್ಯರನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದಾರೆ.

ಪಿಎಫ್‌ಐ ದಿಲ್ಲಿ ಘಟಕದ ಅಧ್ಯಕ್ಷ ಮುಹಮ್ಮದ್ ಇಲಿಯಾಸ್ ಮತ್ತು ರಾಜ್ಯ ಕಾರ್ಯದರ್ಶಿ ಫರ್ವೇಝ್ ಅಹ್ಮದ್‌ರನ್ನು ಬಂಧಿಸಲಾಗಿದ್ದು ,ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪೌರತ್ವ ವಿರೋಧಿ ಪ್ರತಿಭಟನೆಗೆ ಆರ್ಥಿಕ ನೆರವು ಒದಗಿಸಿರುವ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗುವುದು. ಬಂಧಿತರಿಗೆ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉಚ್ಛಾಟಿತ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಹುಸೈನ್ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಮರುದಿನ ಈ ಬಂಧನ ನಡೆದಿದೆ. ಹುಸೈನ್ ಪಿಎಫ್‌ಐ ಜತೆ ಹೊಂದಿದ್ದ ನಂಟಿನ ಬಗ್ಗೆಯೂ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News